ಮಂಗಳೂರು : ವಿಶೇಷ ಚೇತನ ಮಕ್ಕಳ ಆರೈಕೆ ಬಹಳ ಕಷ್ಟ. ನಿತ್ಯದ ಕೆಲಸಗಳನ್ನು ಅವರಿಗೆ ಅರ್ಥವಾಗುವಂತೆ, ಮನಮುಟ್ಟುವಂತೆ ಹೇಳುವುದು ಸುಲಭದ ಮಾತಲ್ಲ.
ಈ ರೀತಿ ಆಟಿಸಂ ಇರುವ ಮಕ್ಕಳಿಗೆ ವಿಶೇಷ ತರಬೇತಿ ಅಗತ್ಯವಿರುವ ಹಿನ್ನೆಲೆ ಮಂಗಳೂರಿನ ಶಕ್ತಿನಗರದಲ್ಲಿರುವ ಸಾನಿಧ್ಯ ವಿಶೇಷ ಚೇತನರ ವಸತಿ ಶಾಲೆ ಇಂದಿನಿಂದ ತರಗತಿ ಆರಂಭಿಸಿದೆ.
ಆಟಿಸಂ ಎಂದರೇನು? : ಆಟಿಸಂ ಎಂದರೆ ಮಾನಸಿಕ ಸಾಮರ್ಥ್ಯವನ್ನು ಕುಂಠಿತಗೊಳಿಸುವ ಜೀವನ ಪರ್ಯಂತದ ಅಂಗವಿಕಲ ವ್ಯವಸ್ಥೆ. ಈ ಪ್ರಕ್ರಿಯೆಯಲ್ಲಿ ಹುಟ್ಟಿದಾಗ ಮಗು ಸಾಮಾನ್ಯವಾಗಿದ್ದರೂ ಒಂದುವರೆ ವರ್ಷದಿಂದ ಮೂರು ವರ್ಷದೊಳಗೆ ಸಂಭವಿಸಬಹುದಾದ ಕಾಯಿಲೆಯಿಂದ ಆಟಿಸಂಗೆ ಒಳಗಾಗುತ್ತದೆ.
ಹಾಗಂತಾ, ಈ ಮಕ್ಕಳು ನಿಜವಾಗಿ ವಿಶೇಷ ಚೇತನರಲ್ಲ. ಇವರಲ್ಲಿನ ವರ್ತನೆಯ ಸಮಸ್ಯೆಗಳಿಂದ ಇವರು ಸಾಮಾನ್ಯ ಮಕ್ಕಳಂತೆ ಇರದೆ, ವಿಶೇಷ ಚೇತನರಂತೆ ಭಾಸವಾಗುತ್ತಾರೆ.
ಸಾನಿಧ್ಯ ವಿಶೇಷ ಮಕ್ಕಳ ಶಾಲೆಯಲ್ಲಿ ಮುಖ್ಯವಾಗಿ ವಿಶೇಷ ಚೇತನ ಮಕ್ಕಳಿಗೆ ಐಇಬಿ(ಇಂಡಿವಿಜ್ವಲೈಝ್ ಡ್ ಎಜುಕೇಶನ್ ಪ್ರೋಗ್ರಾಂ) ಶಿಕ್ಷಣವನ್ನು ನೀಡಲಾಗುತ್ತದೆ. ಅದಕ್ಕಾಗಿಯೇ ವಿಶೇಷ ತರಗತಿಯ ಮೂಲಕ ವಿಶೇಷ ಶಿಕ್ಷಕರೇ ಇಲ್ಲಿನ ವಿದ್ಯಾರ್ಥಿಗಳಿಗೆ ಬೋಧಕರಾಗಿದ್ದಾರೆ.
ಸಾನಿಧ್ಯ ವಿಶೇಷ ಮಕ್ಕಳ ಶಾಲೆ ಆರಂಭವಾಗಿ 20 ವರ್ಷ ಪೂರೈಸಿದ ಸದುದ್ದೇಶದಿಂದ ಆಟಿಸಂ ಮಕ್ಕಳಿಗೆಂದು ತರಗತಿಯನ್ನು ಆರಂಭಿಸಲಾಗುತ್ತಿದೆ. ಆಟಿಸಂ ಮಕ್ಕಳಿಗೆ ಪಂಚೇಂದ್ರಿಯಗಳನ್ನು ಪ್ರಚೋದಿಸುವ ತರಗತಿಯ ವ್ಯವಸ್ಥೆಗಳ ಅಗತ್ಯವಿದೆ. ಅದಕ್ಕಾಗಿ ಆಟಿಸಂ ಹೊಂದಿರುವ ಮಕ್ಕಳಿಗೆ ಸಾನಿಧ್ಯ ಶಾಲೆ ಆ್ಯಕ್ಟಿವಿಟೀಸ್ ಆಫ್ ಡೈಲಿ ಲಿವೀಂಗ್ ಸ್ಕಿಲ್ಸ್ ಮೂಲಕ ಶಿಕ್ಷಣ ನೀಡುತ್ತಿದೆ.
ಬೆಳಗ್ಗೆ ಏಳುವುದರಿಂದ ತೊಡಗಿ ಸಂಜೆ ಮಲಗುವವರೆಗೆ ದಿನನಿತ್ಯದ ಬದುಕಿನಲ್ಲಿ ನಾವು ಮಾಡುವ ಕೆಲಸಗಳನ್ನು ಸಾಮಾನ್ಯವಾಗಿ ಯಾವ ರೀತಿ ಮಾಡುತ್ತೇವೆಯೋ ಅಂದರೆ ಶೌಚಾಲಯ ಬಳಕೆ, ಬ್ರಷ್, ಸ್ನಾನ ಮಾಡುವುದು, ಉಡುಪು ಧರಿಸುವುದು, ಊಟ ಮಾಡುವುದು, ತಟ್ಟೆ, ಬಟ್ಟಲು ತೊಳೆಯೋದು ಇಂತಹ ಚಟುವಟಿಕೆಗಳ ಬಗ್ಗೆ ಹಂತ ಹಂತವಾಗಿ ತರಬೇತಿ ನೀಡಲಾಗುತ್ತದೆ.
ಆಟಿಸಂ ಹೊಂದಿರುವ ಮಕ್ಕಳು ಜೀವನ ಪರ್ಯಂತ ಇದರಿಂದ ಹೊರಬರಲಾಗದಿದ್ದರೂ, ಇಂತಹ ತರಬೇತಿಗಳಿಂದ ಅವರು ತಮ್ಮ ಕೆಲಸಗಳನ್ನು ತಾವೇ ಮಾಡುವ ಮೂಲಕ ಸಮಾಜದ ಮುಖ್ಯವಾಹಿನಿಯಲ್ಲಿ ಎಲ್ಲರೊಂದಿಗೆ ಇರಲು ಸಾಧ್ಯವಾಗುತ್ತದೆ.
ಇದಕ್ಕಾಗಿ ಅವರ ವರ್ತನೆಯ ಸಮಸ್ಯೆಗಳನ್ನು ಪರಿವರ್ತನೆ ಮಾಡುವ ಜಾಣ್ಮೆಯನ್ನು ಶಿಕ್ಷಕರು ಹೊಂದಿರಬೇಕಾಗುತ್ತದೆ. ಅಲ್ಲದೆ, ಶಾಲೆಯಲ್ಲಿ ಆ ಮಕ್ಕಳಿಗೆ ಸ್ಪೀಚ್ ಥೆರಪಿ, ಮನಶಾಸ್ತ್ರಜ್ಞರಿಂದ ಆಪ್ತ ಸಲಹೆ ನೀಡಲಾಗುತ್ತದೆ.
ಸಾನಿಧ್ಯ ವಿಶೇಷ ಚೇತನರ ವಸತಿ ಶಾಲೆಯ ನಿರ್ವಾಹಕ ವಸಂತ ಕುಮಾರ್ ಶೆಟ್ಟಿ ಮಾತನಾಡಿ, ಈಗಿನ ಪ್ರಾರಂಭಿಕ ಹಂತದಲ್ಲಿ 3 ವರ್ಷದಿಂದ 35 ವರ್ಷದವರೆಗಿನ 32 ಆಟಿಸಂ ವಿದ್ಯಾರ್ಥಿಗಳಿದ್ದಾರೆ. ಅವರಿಗಾಗಿ ಮೂರು ತರಗತಿಗಳಲ್ಲಿ ಮತ್ತು ತರಗತಿಯ ಹೊರಗೆ ವ್ಯವಸ್ಥೆ ಮಾಡಲಾಗಿದೆ.
ಇದಕ್ಕಾಗಿ ಐದಾರು ಮಂದಿ ಶಿಕ್ಷಕರನ್ನು ಅಣಿಗೊಳಿಸಲಾಗಿದೆ. ಅಲ್ಲದೆ, ಆಟಿಸಂ ಮಕ್ಕಳಿಗೆ ಆಸಕ್ತಿ ಮೂಡಿಸಲು ಸುಮಾರು ಒಂದು ಲಕ್ಷ ರೂ. ವೆಚ್ಚದಲ್ಲಿ ಮಾತನಾಡುವ ಪುಸ್ತಕಗಳನ್ನು ಖರೀದಿಸಿದ್ದೇವೆ. ಈ ಪ್ರಯತ್ನದಲ್ಲಿ ನಾವು ನೂರಕ್ಕೆ ನೂರು ಯಶಸ್ಸು ಕಾಣದಿದ್ದರೂ, ಸ್ವಲ್ಪ ಮಟ್ಟಿನ ಪ್ರಯೋಜನ ನಮ್ಮ ಆಟಿಸಂ ಮಕ್ಕಳಿಗೆ ಆಗಲಿದೆ ಎಂದು ಹೇಳಿದರು.