ದಕ್ಷಿಣ ಕನ್ನಡ: ತಾನು ಪ್ರೀತಿಸುತ್ತಿದ್ದ ಹಿಂದೂ ಯುವತಿಯ ಜೊತೆಗಿದ್ದ ಸಮಯದಲ್ಲಿ ತನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಮುಸ್ಲಿಂ ಯುವಕನೊಬ್ಬ ಕೆಲವು ವ್ಯಕ್ತಿಗಳ ವಿರುದ್ಧ ದಕ್ಷಿಣ ಕನ್ನಡದ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.
ಮಂಗಳವಾರ ಮಧ್ಯಾಹ್ನ 12.15 ಗಂಟೆಗೆ ಕಡಬ ತಾಲೂಕು ಸಿರಿಬಾಗಿಲು ಗ್ರಾಮದ ದೇರಣೆ ಎಂಬಲ್ಲಿ ನಜೀರ್ (21 ವರ್ಷ) ಎಂಬಾತ ತನ್ನ ಅನ್ಯಧರ್ಮಿಯ ಪ್ರಿಯತಮೆಯೊಂದಿಗೆ ಆಟೋದಲ್ಲಿ ಹೋಗುತ್ತಿದ್ದ ವೇಳೆ ಸುರೇಂದ್ರ, ತೀರ್ಥ ಪ್ರಸಾದ್, ಜಿತೇಶ್ ಮತ್ತು ಇತರರು ಹಲ್ಲೆ ನಡೆಸಿದ್ದಾರೆ ಎಂದು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಾಲಚಂದ್ರ ಹಾಗೂ ರಂಜಿತ್ ಎಂಬವರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.
ನಜೀರ್ ಆಟೋರಿಕ್ಷಾದಲ್ಲಿ ಹಿಂದೂ ಯುವತಿಯೊರ್ವಳನ್ನು ಕುಳ್ಳಿರಿಸಿಕೊಂಡು ಉಪ್ಪಿನಂಗಡಿಯಿಂದ ಮಂಗಳೂರು - ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮೂಲಕ ಗುಂಡ್ಯಕ್ಕೆ ಬಂದು ಗುಂಡ್ಯದಿಂದ ಸುಬ್ರಹ್ಮಣ್ಯ ರಸ್ತೆಯಲ್ಲಿ ಚಲಾಯಿಸಿಕೊಂಡು ಹೋಗುತ್ತಿದ್ದ ಎನ್ನಲಾಗಿದೆ.
ಈ ವೇಳೆ, ಕಡಬ ತಾಲೂಕು ಸಿರಿಬಾಗಿಲು ಗ್ರಾಮದ ದೇರಣೆ ಎಂಬಲ್ಲಿ ಸುರೇಂದ್ರ, ತೀರ್ಥಪ್ರಸಾದ್, ಜಿತೇಶ್ ಮತ್ತು ಇತರರು ನಜೀರ್ನ ಅಟೋರಿಕ್ಷಾವನ್ನು ತಡೆದು ನಿಲ್ಲಿಸಿ, ನೀವು ಎಲ್ಲಿಗೆ ಹೋಗುತ್ತಿದ್ದೀರಿ? ನಿಮ್ಮ ಹೆಸರೇನು? ಎಂದು ಕೇಳಿದಾಗ ನಜೀರ್ ಮತ್ತು ಜೊತೆಯಲ್ಲಿದ್ದ ಯುವತಿ ತಮ್ಮ ಹೆಸರನ್ನು ಹೇಳಿದಾಗ ಆರೋಪಿಗಳು ನಜೀರ್ ನನ್ನು ಉದ್ದೇಶಿಸಿ ಅಸಭ್ಯ ಪದ ಬಳಸಿ, ನಿನಗೆ ತಿರುಗಾಡಲು ಹಿಂದೂ ಹುಡುಗಿಯೇ ಆಗಬೇಕಾ? ಎಂದು ಹೇಳುತ್ತಾ ಕೈಯಿಂದ ನಜೀರ್ನ ಮುಖಕ್ಕೆ ಹೊಡೆದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ರಸ್ತೆಯ ಬದಿಯ ಪೊದೆಯಿಂದ ಬೆತ್ತವನ್ನು ತುಂಡು ಮಾಡಿಕೊಂಡು ಬಂದು ಬೆತ್ತದಿಂದ ಬೆನ್ನಿಗೆ ಕಾಲಿಗೆ ಕೈಗೆ ಹಲ್ಲೆ ನಡೆಸಿದ್ದಾರೆ ಎಂಬುದಾಗಿ ದೂರು ನೀಡಲಾಗಿದೆ. ಅಲ್ಲದೇ ಇನ್ನು ಮುಂದಕ್ಕೆ ಹಿಂದೂ ಹುಡುಗಿಯನ್ನು ಸುತ್ತಾಡಿಸಿದರೆ ಕೊಲ್ಲದೆ ಬಿಡುವುದಿಲ್ಲ ಎಂದು ಜೀವ ಬೆದರಿಕೆಯೊಡ್ಡಿದ್ದಾರೆ ಎನ್ನಲಾಗಿದೆ. ಅಲ್ಲದೆ ನಜೀರ್ ಜೊತೆಗಿದ್ದ ಯುವತಿಗೂ ಅವಾಚ್ಯವಾಗಿ ಬೈದಿದ್ದಾರೆ ಎನ್ನಲಾಗಿದೆ.
ಘಟನೆಯ ಕೆಲ ದೃಶ್ಯಗಳು ರೆಕಾರ್ಡ್ ಆಗಿದ್ದು, ನಜೀರ್ ಮತ್ತು ಯುವತಿಯ ಫೋಟೋಗಳ ಜೊತೆ ವಿಡಿಯೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಈ ಘಟನೆಗೆ ಸಂಬಂಧಿಸಿದಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ 143, 147, 341, 504, 323, 324, 506, 153(a) ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ವಿದ್ಯಾರ್ಥಿ ಅಪಹರಿಸಿ, ಲೈಂಗಿಕ ದೌರ್ಜನ್ಯ ಎಸಗಿ ಪರಾರಿಯಾಗಿದ್ದ ಆರೋಪಿಗಳ ಮೇಲೆ ಪೊಲೀಸರಿಂದ ಫೈರಿಂಗ್