ಕಡಬ(ದ.ಕ): ನಮ್ಮಲ್ಲಿರುವ ಪ್ರತಿಭೆಗೆ ಉತ್ತಮ ವೇದಿಕೆ ಸಿಕ್ಕರೆ ಅದು ಪ್ರಪಂಚಕ್ಕೆ ತಾನಾಗಿಯೇ ಪರಿಚವಾಗುತ್ತದೆ. ಅದರಂತೆ ಅಪ್ಪಟ ಗ್ರಾಮೀಣ ಭಾಗವಾಗಿರುವ ಕಡಬ ತಾಲೂಕಿನ ಕೋಡಿಂಬಾಳದ ಬಹುಮುಖ ಪ್ರತಿಭೆಯೊಬ್ಬರು ಪ್ರಚಾರವಿಲ್ಲದೆ ಹಾಡುಗಾರಿಕೆ ಮತ್ತು ತನ್ನ ಕೈ ಚಳಕದಲ್ಲಿ ಹಲವು ಕಲಾಕೃತಿಗಳನ್ನು ರಚಿಸಿ ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕಡಬದ ಕೋಡಿಂಬಾಳ ಗ್ರಾಮದ ಯುವ ಕಲಾವಿದ ಶೇಖರ್ ಕಲ್ಲಂತಡ್ಕ, ಕಲಾಕೃತಿ ರಚನೆಗಾರನಾಗಿ ತನ್ನ ಪ್ರತಿಭೆಯನ್ನು ಅನಾವರಣಗೊಳಿಸುತ್ತಿದ್ದಾರೆ. ಅಲ್ಲದೆ ಉತ್ತಮ ಗಾಯಕನಾಗಿಯೂ ಹೆಸರು ಗಳಿಸಿದ್ದಾರೆ. ಇತ್ತೀಚೆಗೆ ತುಳುನಾಡಿನ ಕಾರ್ಣಿಕ ದೈವ ಸ್ವಾಮಿ ಕೊರಗಜ್ಜ ದೈವದ ಚಿತ್ರ ಬಿಡಿಸಿ ಪ್ರಶಂಸೆ ಪಡೆದಿದ್ದಾರೆ.
ಎಲೆಯಲ್ಲಿ ಮತ್ತು ಸಾಬೂನಿನಲ್ಲಿ ಆಕೃತಿಗಳ ರಚನೆ ಮಾಡುವುದು ಇವರ ಕೈಚಳಕದ ವೈಶಿಷ್ಟ್ಯತೆ. ಇದಲ್ಲದೆ ಕಡಬದ ವಿವಿಧ ಭಾಗಗಳಲ್ಲಿ ಗಾಯನ ತಂಡದಲ್ಲಿ ಹಾಡುಗಾರನಾಗಿ ಭಾಗವಹಿಸಿ ಹಲವು ಭಕ್ತಿಗೀತೆ, ಚಿತ್ರಗೀತೆ, ಜನಪದ ಗೀತೆಗಳನ್ನು ಹಾಡುತ್ತಿದ್ದಾರೆ.
ಶಾಲಾ ದಿನಗಳಲ್ಲಿಯೇ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಂಡು ಚಿತ್ರಕಲೆ, ಕವನ, ಹಾಡು ರಚನೆ, ಹಾಡುಗಾರಿಕೆ, ಕಚ್ಚಾ ವಸ್ತುಗಳಿಂದ ಆಕೃತಿ ರಚಿಸುವುದರಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದೆ. ಮನೆಯವರ ಮತ್ತು ಸ್ನೇಹಿತರ ನಿರಂತರ ಪ್ರೋತ್ಸಾಹದಿಂದಾಗಿ ನನ್ನ ಹವ್ಯಾಸವನ್ನು ಮುಂದುವರಿಸಲು ಸಾಧ್ಯವಾಗಿದೆ ಎನ್ನುತ್ತಾರೆ ಶೇಖರ್. ಸದ್ಯ ಎಲೆಮರೆಯ ಕಾಯಿಯಂತಿರುವ ಈ ಗ್ರಾಮೀಣ ಯುವ ಕಲಾವಿದನ ಕನಸು ನನಸಾಗಲಿ ಅನ್ನೋದೇ ನಮ್ಮ ಆಶಯ.