ಉಪ್ಪಿನಂಗಡಿ: ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಜಾಬ್ ಧರಿಸಿಕೊಂಡು ಬಂದಿರುವ ಮತ್ತೋರ್ವ ವಿದ್ಯಾರ್ಥಿನಿಯನ್ನು ಶುಕ್ರವಾರ ಅಮಾನತುಗೊಳಿಸಲಾಗಿದೆ. ಈ ಮೂಲಕ ಹಿಜಾಬ್ ಕಾರಣದಿಂದ ಒಟ್ಟಾರೆಯಾಗಿ ಈ ಕಾಲೇಜಿನ 7 ವಿದ್ಯಾರ್ಥಿನಿಯರನ್ನು ಪ್ರಾಂಶುಪಾಲರು ಅಮಾನತುಗೊಳಿಸಿದಂತಾಗಿದೆ.
ಈ ಹಿಂದೆ ಬುಧವಾರ 6 ವಿದ್ಯಾರ್ಥಿನಿಯರನ್ನು ಒಂದು ವಾರಗಳ ಕಾಲ ಅಮಾನತುಗೊಳಿಸಲಾಗಿತ್ತು. ಗುರುವಾರ ವರದಿಗೆ ಬಂದ ಪತ್ರಕರ್ತರ ಮೇಲೆ ದಾಳಿ ನಡೆಸಿದ ವಿಚಾರವಾಗಿ ಸುದ್ದಿಯಾಗಿದ್ದ ಕಾಲೇಜಿನಲ್ಲಿ, ಕೆಲ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಬರುತ್ತಿರುವುದನ್ನು ವಿರೋಧಿಸಿ ವಿದ್ಯಾರ್ಥಿಗಳ ಗುಂಪೊಂದು ತರಗತಿ ಬಹಿಷ್ಕರಿಸಿ ಕಾಲೇಜು ಆವರಣದಲ್ಲಿ ಪ್ರತಿಭಟನೆ ನಡೆಸಿತ್ತು.
ಕಳೆದ ಕೆಲವು ದಿನಗಳಿಂದ ಈ ಕಾಲೇಜಿನಲ್ಲಿ ಅಹಿತಕರ ಘಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ಮಧ್ಯಾಹ್ನ ಶಾಸಕರ ಅಧ್ಯಕ್ಷತೆಯಲ್ಲಿ ಸಿಡಿಸಿ ಸಭೆ ನಡೆಯಿತು. ಅದರಲ್ಲಿ ನ್ಯಾಯಾಲಯದ ತೀರ್ಪು ತರಗತಿಯೊಳಗೆ ಮಾತ್ರ ಅನ್ವಯಿಸುತ್ತಿದ್ದು, ಕಾಲೇಜು ಕಾರಿಡಾರ್ನಲ್ಲಿ ಹಿಜಾಬ್ ಧರಿಸುತ್ತಿರುವುದರಿಂದ ಸಮಸ್ಯೆಗಳು ಉಂಟಾಗುತ್ತಿವೆ. ಕಾಲೇಜು ಆವರಣದಲ್ಲಿ ಕಾಲೇಜು ಸಮವಸ್ತ್ರಕ್ಕೆ ಹೊರತಾದ ಇತರ ಬಟ್ಟೆಗಳನ್ನು ತೊಡುವಂತಿಲ್ಲ. ಈ ನಿಯಮವನ್ನು ಉಲ್ಲಂಘಿಸಿ ಬರುವ ವಿದ್ಯಾರ್ಥಿಗಳನ್ನು ತಕ್ಷಣವೇ ಅಮಾನತುಗೊಳಿಸಬೇಕು ಎಂಬ ಸ್ಪಷ್ಟ ನಿರ್ಧಾರಕ್ಕೆ ಬರಲಾಯಿತು.
ಅಮಾನತುಗೊಂಡ ವಿದ್ಯಾರ್ಥಿನಿಯರು ಕಾಲೇಜಿನ ನಿಯಮದಂತೆ ವಾಪಸ್ ಬರಲು ಇಚ್ಚಿಸಿದಲ್ಲಿ, ಅಂತಹವರ ಕೈಯಲ್ಲಿ ಮುಚ್ಚಳಿಕೆ ಬರೆಸಿಕೊಂಡು ಕಲಿಕೆಗೆ ಅವಕಾಶ ಕಲ್ಪಿಸಬೇಕು. ಮುಚ್ಚಳಿಕೆ ಹೊರತಾಗಿಯೂ ನಿಯಮ ಉಲ್ಲಂಘಿಸುವ ಕೃತ್ಯವೆಸಗಿದರೆ ನಿರ್ದಾಕ್ಷಿಣ್ಯವಾಗಿ ಕಾಲೇಜಿನಿಂದ ಡಿಬಾರ್ ಮಾಡಬೇಕೆಂದು ನಿರ್ಣಯ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಈ ಬಗ್ಗೆ ಕಾಲೇಜಿನ ಪ್ರಾಂಶುಪಾಲರಿಗೆ ನಿರ್ದೇಶನ ನೀಡಲಾಯಿತು.
ಜೂ. 2ರಂದು ಕಾಲೇಜಿನಲ್ಲಿ ನಡೆದ ಪತ್ರಕರ್ತರ ಮೇಲಿನ ಹಲ್ಲೆ ಪ್ರಕರಣ, ರಕ್ಷಣೆಗೆ ಪೊಲೀಸರನ್ನು ಕರೆಯಿಸದಿರುವ ಪ್ರಾಂಶುಪಾಲರ ನಡೆ, ಸಿಸಿ ಕ್ಯಾಮರಾದ ರೆಕಾರ್ಡ್ ದಿಢೀರ್ ಕಣ್ಮರೆಯಾಗಿರುವುದು, ರಾತ್ರಿ ವೇಳೆ ನಾಲ್ವರು ವಿದ್ಯಾರ್ಥಿನಿಯರನ್ನು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಕರೆಯಿಸಿ ಪತ್ರಕರ್ತರ ವಿರುದ್ಧ ಸುಳ್ಳುದೂರು ಸಲ್ಲಿಸಲು ಒತ್ತಡ ಹೇರಲಾಗಿತ್ತು ಎಂಬ ಆರೋಪಗಳ ಬಗ್ಗೆಯೂ ಸಭೆಯಲ್ಲಿ ಪ್ರಸ್ತಾಪವಾಯಿತು ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಹಿಜಾಬ್ ಗಲಾಟೆ: ವರದಿಗೆ ತೆರಳಿದ್ದ ಮಾಧ್ಯಮದವರ ಮೇಲೆ ಹಲ್ಲೆ ಯತ್ನ, ರಕ್ಷಣೆಗೆ ಮನವಿ