ಮಂಗಳೂರು: ಪ್ರಧಾನಿ ಮೋದಿಯವರು 6 ವರ್ಷಗಳಲ್ಲಿ 166 ಯೋಜನೆಗಳನ್ನು ಜಾರಿಗೆ ತಂದಿದ್ದು, ದ.ಕ ಜಿಲ್ಲೆಯಲ್ಲಿ ಈ ಯೋಜನೆಗಳು ಶೇ. 100ರಷ್ಟು ಯಶಸ್ವಿಯಾಗಿವೆ. ಜಿಲ್ಲೆಯಲ್ಲಿ ಇಲ್ಲಿಯತನಕ 4,500 ಜನ ಬೀದಿಬದಿ ವ್ಯಾಪಾರಿಗಳು ನೋಂದಣಿ ಮಾಡಿಕೊಂಡಿದ್ದು, ಅವರಲ್ಲಿ ಈಗಾಗಲೇ 1,500 ಜನರಿಗೆ ಸಾಲ ಮಂಜೂರಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ನಗರದ ಪುರಭವನದಲ್ಲಿ ನಡೆದ ಬೀದಿಬದಿ ವ್ಯಾಪಾರಿಗಳ ಕಿರು ಸಾಲ ವಿತರಣೆ ಸಮಾರಂಭ ಮತ್ತು ಇತರೆ ಯೋಜನೆಗಳ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಕಟ್ಟಕಡೆಯ ವ್ಯಕ್ತಿಯೂ ಸ್ವಾಭಿಮಾನದಿಂದ ಬದುಕಬೇಕು ಎಂದು ಕನಸು ಕಂಡ ಪ್ರಧಾನಿ ಮೋದಿಯವರು ಅದನ್ನು ನನಸಾಗಿಸಲು ಅಂತ್ಯೋದಯ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಮೂಲಕ ಪ್ರಧಾನಿಯವರು ಎಲ್ಲರಿಗೂ ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಲು ನೆರವಾಗಿದ್ದಾರೆ ಎಂದರು.
ಜಿಲ್ಲೆಯಲ್ಲಿರುವ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಮುದ್ರಾ ಸಾಲಕ್ಕೆ ಅರ್ಜಿ ಸಲ್ಲಿಸಿದರೆ ರದ್ದಾಗುತ್ತಿದೆ ಎಂಬ ದೂರು ಕೇಳಿ ಬರುತ್ತಿದೆ. ಯಾರಲ್ಲಿ ಆಧಾರ್ ಕಾರ್ಡ್ ಹಾಗೂ ಶಿಫಾರಸು ಪತ್ರ ಇರುತ್ತದೆಯೋ ಅವರಿಗೆ ಕೂಡಲೇ ಸಾಲ ಮಂಜೂರು ಮಾಡಬೇಕು. ಹಳ್ಳಿಗಳಲ್ಲಿ ಇರುವ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಹಿಂದಿ-ಇಂಗ್ಲಿಷ್ ಮಾತನಾಡುವವರು ಕೆಲಸ ಮಾಡುತ್ತಿದ್ದು, ಒಬ್ಬರನ್ನಾದರೂ ಸ್ಥಳೀಯ ಭಾಷೆಯನ್ನು ಮಾತನಾಡುವವರನ್ನು ನೇಮಿಸಬೇಕು ಎಂದರು.
ಇದನ್ನೂ ಓದಿ: ಬಂಟ ಸಮುದಾಯವನ್ನು ಪ್ರವರ್ಗ-2(ಎ)ಗೆ ವರ್ಗಾಯಿಸಲು ಲೋಕಸಭೆಯಿಂದ ಅನುಮೋದನೆ: ನಳಿನ್ ಕುಮಾರ್ ಭರವಸೆ
ಕೊರೊನಾ ಸಂದರ್ಭದಲ್ಲಿ ಜನರು ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ಪ್ರಧಾನಮಂತ್ರಿಗಳು ಜನರ ಸಮಸ್ಯೆಗಳನ್ನು ಅರಿತು ಮುದ್ರಾ ಯೋಜನೆಯಲ್ಲಿ 50 ಸಾವಿರದಿಂದ 10 ಲಕ್ಷ ರೂ.ವರೆಗೆ ಸಾಲ ನೀಡುತ್ತಿದ್ದಾರೆ. ಆತ್ಮ ನಿರ್ಭರ ಯೋಜನೆಯಲ್ಲಿ ಕೃಷಿಕರ ಉತ್ಪನ್ನಗಳಿಗೆ ಸಹಾಯವಾಗುವ ರೀತಿಯಲ್ಲಿ ಗ್ರಾಪಂನಲ್ಲಿ ಅನುದಾನ, ಬ್ಯಾಂಕ್‌ಗಳಲ್ಲಿ ಸಾಲ ನೀಡಲು ಹಾಗೂ ಬಡ್ಡಿ ಮನ್ನಾ ಹಾಗೂ ಬೀದಿಬದಿ ವ್ಯಾಪಾರಿಗಳಿಗೆ 10 ಸಾವಿರ ರೂ. ಸಾಲ ನೀಡಿದ್ದಾರೆ ಎಂದರು.