ಮಂಗಳೂರು: ಕೇಂದ್ರದ ಮಂತ್ರಿಮಂಡಲದಲ್ಲಿ ಇಂದು ಮಾತನಾಡುವವರು ಯಾರೂ ಇಲ್ಲ. ಅಮಿತ್ ಶಾ ಮಾತ್ರ ಮಾತನಾಡುತ್ತಿದ್ದು, ಮೋದಿ ಸುಮ್ಮನಾಗಿದ್ದಾರೆ. ಅಮಿತ್ ಶಾ ಎಲ್ಲರನ್ನೂ ತಮ್ಮ ಮುಷ್ಠಿಯಲ್ಲಿರಿಸಿಕೊಂಡಿದ್ದಾರೆ ಎಂದು ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಅಮರ್ ಜಿತ್ ಕೌರ್ ಹೇಳಿದರು.
ನಗರದ ಬಿಜೈನಲ್ಲಿರುವ ಕರ್ನಾಟಕ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಎಐಟಿಯುಸಿ ನೂರರ ಸಂಭ್ರಮದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ಕೇಂದ್ರ ಸರ್ಕಾರ ರಾಜತಂತ್ರವನ್ನು ಹಾಳುಗೆಡವುತ್ತಿದೆ. ಉದ್ಯೋಗವನ್ನು ನಿಯಂತ್ರಣ ಮಾಡುತ್ತಿದೆ. ಇದರ ವಿರುದ್ಧ ಪ್ರತಿಭಟನೆ ಮಾಡುವವರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಕಾನೂನುಗಳನ್ನು ತಿದ್ದುಪಡಿ ಮಾಡುತ್ತಿದೆಯೇ ವಿನಃ ಕಾರ್ಮಿಕರ ಅಭಿವೃದ್ಧಿ ನೀತಿಯನ್ನು ಜಾರಿಗೊಳಿಸುತ್ತಿಲ್ಲ ಎಂದು ಕಿಡಿಕಾರಿದರು.
ಕಾರ್ಮಿಕ ಸಂಘಟನೆಗಳು ಕೇವಲ ಸ್ವಾತಂತ್ರ್ಯಕ್ಕಾಗಿ ಮಾತ್ರವಲ್ಲ, ಸಮಾನತೆಗಾಗಿ, ಶೋಷಣೆ ಹಾಗೂ ಅನ್ಯಾಯದ ವಿರುದ್ಧವೂ ಧ್ವನಿ ಎತ್ತಿದವು. ಯಾವಾಗ ಕಾರ್ಮಿಕ ಸಂಘಟನೆಗಳು ತಲೆ ಎತ್ತಿತೋ ಆ ಬಳಿಕ ಪ್ರತಿಭಟನೆಗಳು ಪ್ರಾರಂಭವಾಯಿತು. ಕಾರ್ಮಿಕರ ಅಭಿವೃದ್ಧಿಗಾಗಿ ಸಾಕಷ್ಟು ನೀತಿ ನಿಯಮಗಳು, ಪಿಂಚಣಿ, ಆರೋಗ್ಯ ಸೌಲಭ್ಯ ಮುಂತಾದವುಗಳು ಕಾರ್ಮಿಕ ಸಂಘಟನೆಗಳ ಹೋರಾಟದ ಫಲವಾಗಿ ಜಾರಿಗೆ ಬಂತು ಎಂದು ಅಮರ್ ಜಿತ್ ಕೌರ್ ಹೇಳಿದರು.
ಈ ಸಂದರ್ಭ ಎಐಟಿಯುಸಿ ಜಿಲ್ಲಾಧ್ಯಕ್ಷ ಕೆ.ವಿ.ಭಟ್, ಸಿಪಿಐ ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್, ಬ್ಯಾಂಕ್ ನೌಕರರ ಸಂಘದ ನಾಯಕರಾದ ನಾಗರಾಜ್, ವಿನ್ಸೆಂಟ್, ಹೆಚ್.ವಿ.ರಾವ್ ಉಪಸ್ಥಿತರಿದ್ದರು.