ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ವಾರಕ್ಕೆ 30-40 ಜನರು ಸೋಂಕಿತರು ಮೃತಪಡುತ್ತಿದ್ದಾರೆ. ಆದ್ದರಿಂದ ಜಿಲ್ಲೆಯಲ್ಲಿ ಕೋವಿಡ್ಗೆ ತುತ್ತಾಗಿ ಮೃತಪಟ್ಟವರ ಸಂಖ್ಯೆ ಹಾಗು ಒಂದು ಲಕ್ಷ ರೂ. ಪರಿಹಾರ ಪಡೆಯಲು ಅರ್ಹರು ಎಂಬುದರ ಬಗ್ಗೆ ಜಿಲ್ಲಾಧಿಕಾರಿಯವರು ನಾಳೆಯೊಳಗೆ ನಿರ್ದಿಷ್ಟ ಉತ್ತರ ನೀಡಲಿ ಎಂದು ಎಐಸಿಸಿ ರಾಷ್ಟ್ರೀಯ ಕಾರ್ಯದರ್ಶಿ ಐವನ್ ಡಿಸೋಜ ಆಗ್ರಹಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಈ ಬಗ್ಗೆ ಡಿಸಿ ಉತ್ತರ ನೀಡದಿದ್ದಲ್ಲಿ ಇದರಲ್ಲಿ ಗೋಲ್ ಮಾಲ್ ಮಾಡಲಾಗಿದ್ದು, ಜಿಲ್ಲಾಧಿಕಾರಿಯವರು ಇದರಲ್ಲಿ ಭಾಗಿ ಎಂದು ಹೇಳಬೇಕಾಗುತ್ತದೆ ಎಂದರು. ಕೋವಿಡ್ನಿಂದ ಇಷ್ಟೊಂದು ಪ್ರಮಾಣದ ಸಾವು ನೋವಿಗೆ ಜಿಲ್ಲಾಡಳಿತದ ವೈಫಲ್ಯವೇ ಕಾರಣ. ಈ ಬಗ್ಗೆ ನಾವು ಕೋರ್ಟ್ ಮೆಟ್ಟಿಲೇರಬೇಕಾಗುತ್ತದೆ. ಸರ್ಕಾರಕ್ಕೆ ಲಸಿಕೆ ಪೂರೈಸಲು ಅಸಾಧ್ಯವಾದಲ್ಲಿ ದಾನಿಗಳಿಂದ ದುಡ್ಡು ಕೇಳಲಿ. ನಾವೂ ಸಹಾಯ ಮಾಡುತ್ತೇವೆ. ಈ ಮೂಲಕ ಎಲ್ಲರಿಗೂ ಲಸಿಕೆ ನೀಡಲಿ. ವ್ಯಾಕ್ಸಿನ್ ಹಾಕಿಸಿಕೊಳ್ಳಲು ಬಂದವರನ್ನು ಹಿಂದೆ ಕಳುಹಿಸೋದು ಬೇಡ ಎಂದರು.
ಐಪಿಎಸ್ನಲ್ಲಿ ಪರೀಕ್ಷೆ ಬರೆದು ಹಾಗೂ ಸೀನಿಯಾರಿಟಿ ಪ್ರಕಾರ ಹುದ್ದೆಗೇರಿದವರು ಎಂಬ ವಿಭಾಗವಿದೆ. ಈಗ ಆಡಳಿತದಲ್ಲಿರುವ ಬಿಜೆಪಿಗರು ಡೈರೆಕ್ಟ್ ಐಪಿಎಸ್ ಅಲ್ಲ. ನಾನು ಐಪಿಎಸ್. ಹಾಗಾಗಿ ಇವರ ಬಾಳ್ವೆ ಕಡಿಮೆ. ಈ ಸರ್ಕಾರ ಆರೇ ತಿಂಗಳಲ್ಲಿ ಬಿದ್ದು ಹೋಗಲಿದೆ. ಜಿ.ಪಂ, ತಾ.ಪಂ ಚುನಾವಣೆ ಆದ ತಕ್ಷಣ ಬಿಜೆಪಿ ಸೋಲುತ್ತದೆ. ಸರ್ಕಾರ ಪತನವಾಗುತ್ತದೆ ಎಂದು ಐವನ್ ಭವಿಷ್ಯ ನುಡಿದರು.
ಆ ಕಾರಣದಿಂದಲೇ ಇವರು ಜಿ.ಪಂ, ತಾ.ಪಂ ಚುನಾವಣೆ ಮಾಡಿಲ್ಲ. ಮತ್ತೆ ಈಗ ಹೆದರಿಕೆ ಆರಂಭವಾಗಿ ಸರ್ಕಾರ ಬಿದ್ದಲ್ಲಿ ಸಹಾಯ ಮಾಡಬೇಕೆಂದು ದೇವೇಗೌಡರ ಬಳಿ ಹೋಗಿದ್ದಾರೆ. ಅವರು ನೀವು ಬಿದ್ದಲ್ಲಿ ನಾವಿದ್ದೇವೆ ಎಂದು ಹೇಳಿದ್ದಾರೆ. ಅವರು ಯಾರು ಬೀಳುತ್ತಾರೆಂಬುದನ್ನೇ ಕಾಯುತ್ತಿದ್ದಾರೆ. ಬಿದ್ದಾಗ ಅವರು ಸೇರಿಕೊಳ್ಳುತ್ತಾರೆ ಎಂದು ಐವನ್ ಡಿಸೋಜ ವ್ಯಂಗ್ಯವಾಡಿದರು.