ಮಂಗಳೂರು(ದಕ್ಷಿಣ ಕನ್ನಡ): ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಪಿಎಫ್ಐ ಸಂಬಂಧದ ಬಗ್ಗೆ ನಾವು ದಾಖಲೆ ಇಲ್ಲದೆ ಏನನ್ನೂ ಹೇಳುವುದಿಲ್ಲ. ಪ್ರಕರಣದ ತನಿಖೆಯ ಬಳಿಕ ಯಾರಿಗೆಲ್ಲ ಪಿಎಫ್ಐ ಜೊತೆ ನಂಟಿದೆ. ಆರೋಪಿಗಳ ಕೇರಳ ಲಿಂಕ್ ಬಗ್ಗೆ ಈಗ ಏನೂ ಹೇಳುವುದಕ್ಕೆ ಆಗುವುದಿಲ್ಲ. ಈಗಾಗಲೇ ಸೆರೆಸಿಕ್ಕಿರುವ ಆರೋಪಿಗಳೆಲ್ಲ ಸ್ಥಳೀಯರೇ ಆಗಿದ್ದಾರೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಮಾಹಿತಿ ನೀಡಿದರು.
ಮಂಗಳೂರಿನಲ್ಲಿ ಮಾತನಾಡಿದ ಅವರು, ಪ್ರವೀಣ್ ನೆಟ್ಟಾರು ಹತ್ಯೆಯಲ್ಲಿ ಈಗಾಗಲೇ 7 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನೂ ಮೂವರು ಪ್ರಮುಖ ಹಂತಕರು ಪತ್ತೆಯಾಗಬೇಕು. ಅವರ ಬಂಧನಕ್ಕಾಗಿ ದ.ಕ.ಜಿಲ್ಲೆಯ ಹಾಗೂ ಇನ್ನಿತರ ಜಿಲ್ಲೆಯ ಪೊಲೀಸ್ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದೇವೆ. ದ.ಕ.ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಇನ್ನೂ 144 ಸೆಕ್ಷನ್ ಜಾರಿಯಲ್ಲಿದೆ. ಆದ್ದರಿಂದ ಮುಂದೆ ಯಾವ ರೀತಿ ಕಾನೂನು ಸುವ್ಯವಸ್ಥೆ ಕಾಪಾಡಬೇಕು ಎನ್ನುವ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.
ಪ್ರವೀಣ್ ನೆಟ್ಟಾರು ಹತ್ಯೆಗೆ ಪ್ರತ್ಯಕ್ಷ, ಪರೋಕ್ಷವಾಗಿ ಸಹಕರಿಸಿದವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಎನ್ಐಎ ತಂಡವು ಕರ್ನಾಟಕ ಪೊಲೀಸರ ಜೊತೆಗೆ ಪ್ರಕರಣದ ತನಿಖೆ ನಡೆಸುತ್ತಿದೆ. ಪ್ರಕರಣದಲ್ಲಿರುವ ಆರೋಪಿಗಳಲ್ಲಿ ಕೆಲವರು ಭೂಗತರಾಗಿದ್ದು, ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಲಾಗುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಈ ಪ್ರಕರಣದ ಪ್ರಮುಖ ಮೂವರು ಆರೋಪಿಗಳ ಗುರುತು ಪತ್ತೆಯಾಗಿದ್ದು, ಅವರ ಮನೆಯ ವಿಳಾಸ, ತಂದೆ, ತಾಯಿ, ಪತ್ನಿಯ ಬಗ್ಗೆಯೂ ಗೊತ್ತಿದೆ. ಆದರೆ ಆರೋಪಿಗಳನ್ನು ಬಚ್ಚಿಡುವ ಕಾರ್ಯ ನಡೆಯುತ್ತಿದ್ದು ಅವರು ಪ್ಲ್ಯಾನ್ ಮಾಡಿ ಬೇರೆ ಬೇರೆ ಕಡೆಗಳಿಗೆ ಸ್ಥಳಾಂತರಗೊಳ್ಳುತ್ತಿದ್ದಾರೆ ಎಂದು ಹೇಳಿದರು.
ಪಾಝಿಲ್ ಹತ್ಯೆಯ ವಿಚಾರದಲ್ಲಿ ಆರೋಪಿಗಳಿಗೆ ಆಶ್ರಯ ನೀಡಿರುವವರ ಮೇಲೂ ಕ್ರಮ ಕೈಗೊಳ್ಳಲಾಗುತ್ತದೆ. ಈ ಬಗ್ಗೆ ನಾಳೆ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ಸಭೆ ನಡೆಸಲಿದ್ದೇನೆ. ಈ ಪ್ರಕರಣದಲ್ಲೂ ಒಬ್ಬರು, ಇಬ್ಬರ ಬಂಧನ ಬಾಕಿಯಿದೆ ಎಂದರು.
ಇದನ್ನೂ ಓದಿ: ಮಂಗಳೂರಿನವರಿಂದಲೇ ಪ್ರವೀಣ್ ನೆಟ್ಟಾರು ಕೊಲೆ: ಗೃಹ ಸಚಿವ ಆರಗ ಜ್ಞಾನೇಂದ್ರ