ಮಂಗಳೂರು: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರ ಮನೆಗೆ ಮುತ್ತಿಗೆ ಹಾಕಿದ ಎನ್ಎಸ್ಯುಐ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಇಂತಹ ಗೂಂಡಾಗಿರಿ ಮುಂದುವರಿಸಿದರೆ ನಮ್ಮ ಕಾರ್ಯಕರ್ತರು ಇದಕ್ಕೆ ಸರಿಯಾದ ಉತ್ತರ ಕೊಡಲು ಸಮರ್ಥರಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರ ಮನೆಗೆ ಎನ್ಎಸ್ಯುಐ ಮತ್ತು ಕಾಂಗ್ರೆಸ್ ಕಾರ್ಯಕರ್ತರು ದಾಳಿ ಮಾಡಿ ಗೂಂಡಾ ಪ್ರವೃತ್ತಿ ತೋರಿಸಿದ್ದಾರೆ. ಕಾಂಗ್ರೆಸ್ ವೈಚಾರಿಕ ಹೋರಾಟದಲ್ಲಿ ಸೋತಿದೆ. ತನ್ನ ಮೂಲಸಂಸ್ಕೃತಿಯಾದ ಗೂಂಡಾ ಸಂಸ್ಕೃತಿಯನ್ನು ನಡೆಸುತ್ತಿದೆ. ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡ ಮೇಲೆ ಹತಾಶ ಭಾವನೆ ಹೊಂದಿರುವ ಕಾಂಗ್ರೆಸ್ ಗಲಭೆ ಸೃಷ್ಟಿಸಿ, ಬೆಂಕಿ ಹಚ್ಚಿ, ಕಲ್ಲು ತೂರಾಟ ಮಾಡುವ ಪ್ರಕ್ರಿಯೆಗೆ ತೊಡಗಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಗೂಂಡಾ ಸಂಸ್ಕೃತಿ ಮುನ್ನೆಲೆಗೆ: ಅವರದೇ ಶಾಸಕರಾಗಿರುವ ಅಖಂಡ ಶ್ರೀನಿವಾಸ ಅವರ ಮನೆಗೆ ಬೆಂಕಿ ಹಾಕುವ ಕೆಲಸವನ್ನು ಇವರು ಮಾಡಿದ್ದರು. ಇದೆಲ್ಲವನ್ನು ನೋಡಿದಾಗ ಕಾಂಗ್ರೆಸ್ ಗೂಂಡಾ ಸಂಸ್ಕೃತಿ ಮತ್ತೆ ತಲೆ ಎತ್ತಿದೆ ಎಂದು ಕಾಣುತ್ತದೆ. ಪ್ರಜಾಪ್ರಭುತ್ವದಲ್ಲಿ ಸರ್ಕಾರದ ತಪ್ಪುಗಳ ವಿರುದ್ಧ ಹೋರಾಟ, ಆಂದೋಲನ ಮಾಡಬಹುದು. ಸಾರ್ವಜನಿಕ ಆಂದೋಲನ ಮಾಡುವುದು ಪ್ರತಿಪಕ್ಷಗಳ ಪ್ರಕ್ರಿಯೆ. ಯಾವ ವಿಚಾರ ಸರಿಯಿಲ್ಲವೋ ಅದರ ವಿರುದ್ಧ ಜನಾಂದೋಲನ ಮಾಡುವ ಹಕ್ಕಿದೆ. ಅದನ್ನು ಬಿಟ್ಟು ವೈಯಕ್ತಿಕ ದ್ವೇಷ ರಾಜಕಾರಣದ ರೀತಿಯಲ್ಲಿ ಸಚಿವರ ಮನೆಗೆ ನುಗ್ಗಿ ಬಟ್ಟೆಗಳಿಗೆ ಬೆಂಕಿ ಹಾಕುವ ಪ್ರಕ್ರಿಯೆ ಮಾಡುತ್ತಿದ್ದಾರೆ ಎಂದರು.
ವ್ಯವಸ್ಥಿತವಾದ ಷಡ್ಯಂತರ: ಪೊಲೀಸರು ತಕ್ಷಣ ಬಂದು ನಿಯಂತ್ರಣ ಮಾಡಿದ ಪರಿಣಾಮ ದೊಡ್ಡ ಅನಾಹುತ ತಪ್ಪಿದೆ. ತಕ್ಷಣ 15 ಜನ ಕಿಡಿಗೇಡಿಗಳನ್ನು ಬಂಧಿಸಿದ್ದಕ್ಕೆ ಮುಖ್ಯಮಂತ್ರಿಗಳಿಗೆ ಗೃಹಸಚಿವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇದೊಂದು ವ್ಯವಸ್ಥಿತವಾದ ಷಡ್ಯಂತ್ರವಾಗಿದೆ. ಇದರಲ್ಲಿ ಚಿಕ್ಕಮಗಳೂರು, ದಾವಣಗೆರೆ ಮತ್ತು ಬೇರೆ ಬೇರೆ ಪ್ರದೇಶದವರು ಸೇರಿಕೊಂಡು ಈ ಕೃತ್ಯ ಮಾಡಿದ್ದಾರೆ. ಕಾಂಗ್ರೆಸ್ ಈಗ ಸೋಲಿನ ಭೀತಿಯಲ್ಲಿದೆ.
ಕಾಂಗ್ರೆಸ್ನ ಈ ಸಂಸ್ಕೃತಿಗೋಸ್ಕರ ಜನ ಅದನ್ನು ತಿರಸ್ಕಾರ ಮಾಡಿದ್ದಾರೆ. ಗೂಂಡಾಗಿರಿ ಮಾಡುವ ಕಾಂಗ್ರೆಸ್ ನ್ನು ಜನ ಹೊರಗಿಟ್ಟಿದ್ದು, ಮತ್ತೆ ಈಗ ಅದನ್ನು ಕಾಂಗ್ರೆಸ್ ಮಾಡುತ್ತಿದೆ. ಇಂದಿನ ಘಟನೆಯ ಹಿಂದೆ ಯಾರಿದ್ದಾರೆ. ಇದಕ್ಕೆ ಪ್ರೇರಣೆ ಕೊಟ್ಟವರು ಯಾರಿದ್ದಾರೋ ಅವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಸಚಿವ ಬಿ.ಸಿ ನಾಗೇಶ್ ಮನೆಗೆ ನುಗ್ಗಿ ದಾಂಧಲೆ ನಡೆಸಿದವರ ವಿರುದ್ಧ ಕ್ರಮ: ಸಿಎಂ ಬೊಮ್ಮಾಯಿ