ಮಂಗಳೂರು (ದ.ಕನ್ನಡ): ಉಕ್ರೇನ್ನಲ್ಲಿ ರಷ್ಯಾ ದಾಳಿ ಮುಂದುವರಿದಿದ್ದು, ಭಾರತೀಯ ವಿದ್ಯಾರ್ಥಿಗಳನ್ನು ಹಂತ ಹಂತವಾಗಿ ಕರೆತರಲಾಗುತ್ತಿದೆ. ಆದ್ರೆ ಉಕ್ರೇನ್ನಲ್ಲಿ ಸಿಲುಕಿಕೊಂಡಿರುವ ಮಂಗಳೂರು ಮೂಲದ ವಿದ್ಯಾರ್ಥಿನಿ ಅನೈನಾ ಅನ್ನಾ ಪಾಸ್ ಪೋರ್ಟ್ ಇಲ್ಲದೇ ಸಂಕಷ್ಟಕ್ಕೊಳಗಾಗಿದ್ದಾರೆ.
ಮಂಗಳೂರಿನ ದೇರೆಬೈಲ್ನ ಅನೈನಾ ಅನ್ನಾ ದಾಳಿಗೊಳಗಾದ ಖಾರ್ಕಿವ್ ನಗರದಲ್ಲಿ ಇದ್ದರು. ಇವರ ಯುನಿವರ್ಸಿಟಿ ಕಟ್ಟಡದ ಪಕ್ಕದಲ್ಲೇ ಕಟ್ಟಡವೊಂದು ಸ್ಫೋಟಗೊಂಡಿದೆ. ಹಾಗಾಗಿ ಬಂಕರ್ ಬಿಟ್ಟು ರೈಲು ಹತ್ತಿದ್ದಾರೆ. ಆದರೆ, ಇವರ ಪಾಸ್ಪೋರ್ಟ್ ಏಜೆಂಟ್ ಒಬ್ಬರ ಬಳಿ ಇದೆ. ಅವರಿಗೆ ಕರೆ ಮಾಡಿದರೆ ಅವರಿರುವಲ್ಲಿಗೆ ಬಂದು ಪಡೆಯುವಂತೆ ಹೇಳುತ್ತಿದ್ದಾರೆ. ಆದರೆ, ಅವರಿದ್ದ ಸ್ಥಳದಲ್ಲಿ ದಾಳಿ ನಡೆಯುತ್ತಿರುವುದರಿಂದ ಅಲ್ಲಿಗೆ ಹೋಗಲು ಸಾಧ್ಯವಾಗಿಲ್ಲ.
ಇದನ್ನೂ ಓದಿ: 'ಇಲ್ಲೇ ಇದ್ರೆ ನಮ್ಮ ಪ್ರಾಣ ಹೋಗುತ್ತೆ ಸರ್':ಮೃತ ನವೀನ್ ಸ್ನೇಹಿತೆ ಪ್ರತಿಭಾ ಅಳಲು!
ಇದೀಗ ರೈಲು ಹತ್ತಿ ಪೋಲೆಂಡ್ ಕಡೆಗೆ ಹೊರಟಿರುವುದರಿಂದ ಪಾಸ್ಪೋರ್ಟ್ ಸಿಗುವ ಸಾಧ್ಯತೆ ಕಡಿಮೆ. ಈ ಬಗ್ಗೆ ರಾಯಭಾರಿ ಅಧಿಕಾರಿಗಳ ಗಮನಕ್ಕೆ ತಂದಿದ್ದು, ತಾತ್ಕಾಲಿಕ ವ್ಯವಸ್ಥೆಯ ಭರವಸೆಯನ್ನು ನೀಡಿದ್ದಾರೆ ಎಂದು ಅನೈನಾ ಅನ್ನಾ ಅವರ ತಾಯಿ ಸಂಧ್ಯಾ ಅವರು ತಿಳಿಸಿದ್ದಾರೆ.