ಮಂಗಳೂರು: ಸ್ವಾತಂತ್ರ್ಯದ ಅಮೃತೋತ್ಸವದ ಹಿನ್ನೆಲೆಯಲ್ಲಿ ಮಂಗಳೂರಿನ ಶ್ರೀಕ್ಷೇತ್ರ ಕುದ್ರೋಳಿಯಲ್ಲಿ 900 ಕೆಜಿ ಧಾನ್ಯಗಳ ಬೃಹತ್ ತಿರಂಗಾವನ್ನು ಸೃಷ್ಟಿಸಲಾಗಿದ್ದು, ಭಕ್ತರ ಗಮನ ಸೆಳೆಯುತ್ತಿದೆ. ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ರಾಜಗೋಪುರದ ಮುಂಭಾಗದ ನೆಲದಲ್ಲಿ ಈ ಬೃಹತ್ ತಿರಂಗಾವನ್ನು ಧಾನ್ಯಗಳಿಂದ ಮಾಡಲಾಗಿದೆ.
ಈ ಬೃಹತ್ ತಿರಂಗಾವನ್ನು 38 ಅಡಿ ವೃತ್ತದಲ್ಲಿ ಮಾಡಲಾಗಿದೆ. 300 ಕೆಜಿ ಮಸ್ಸೂರು ದಾಲ್, 300 ಕೆಜಿ ಸಾಗು, 300 ಕೆಜಿ ಹೆಸರು ಕಾಳುಗಳನ್ನು ಬಳಸಲಾಗಿದೆ. ತಿರಂಗಾದ ಅಲಂಕಾರಕ್ಕೆ 54 ಕಲಶ, 108 ಬಾಳೆ ಎಲೆ, ಅಕ್ಕಿ ಎಳೆಯಡಿಕೆ, ಚೆಂಡು ಹೂಗಳನ್ನು ಬಳಸಲಾಗಿದೆ. ಜೊತೆಗೆ ಒಟ್ಟು 90 ಕೆಜಿ ತೂಕದ ಕ್ಯಾರೆಟ್, ಮೂಲಂಗಿ, ಬೆಂಡೆಯಿಂದ ತಿರಂಗಾದ ಕಲ್ಪನೆಯನ್ನು ಮೂಡಿಸಲಾಗಿದೆ.
ಫೋಟೋ ಜರ್ನಲಿಸ್ಟ್ ಸತೀಶ್ ಇರಾ ಅವರ ಪರಿಕಲ್ಪನೆ ಹಾಗೂ ಖ್ಯಾತ ಫೋಟೋಗ್ರಾಫರ್, ಕಲಾವಿದ ಪುನೀಕ್ ಶೆಟ್ಟಿಯವರ ಕೈಚಳದಲ್ಲಿ ಈ ಬೃಹತ್ ತಿರಂಗವನ್ನು 30 ಮಂದಿ ಅದ್ಭುತವಾಗಿ ಮೂಡಿಸಿದ್ದಾರೆ. ಶ್ರೀಕ್ಷೇತ್ರದ ಗುರು ಬೆಳದಿಂಗಳು ಹಾಗೂ ಗೋಕರ್ಣನಾಥ ಸೇವಾದಳ ತಂಡ ಈ ಕಾರ್ಯ ಮಾಡಿದೆ. ಆ.13ರ ಮಧ್ಯಾಹ್ನದಿಂದಲೇ ಈ ತಿರಂಗಾ ರಚನೆಗೆ ಸಾಮಗ್ರಿಗಳನ್ನು ಖರೀದಿಸಿ ರಾತ್ರಿ 9ರಿಂದ ತಿರಂಗಾದ ಸ್ಕೆಚ್ ತಯಾರಿಸಲಾಗಿದ್ದು, ಆ.14ರ ಬೆಳಗ್ಗೆ 11 ಗಂಟೆಗೆ ತಿರಂಗಾ ಸಂಪೂರ್ಣವಾಗಿದೆ. ಈ ತಿರಂಗಾ ನಿರ್ಮಾಣಕ್ಕಾಗಿ ಒಟ್ಟು 18 ಗಂಟೆ ಶ್ರಮಿಸಲಾಗಿದೆ. ಕೇಂದ್ರದ ಮಾಜಿ ಸಚಿವ, ಶ್ರೀಕ್ಷೇತ್ರ ಕುದ್ರೋಳಿಯ ಅಭಿವೃದ್ಧಿ ರೂವಾರಿ ಜನಾರ್ದನ ಪೂಜಾರಿ ಈ ಬೃಹತ್ ತಿರಂಗಾವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಮಲ್ಪೆ ಕಡಲ ಕಿನಾರೆಯಲ್ಲಿ ಗಮನ ಸೆಳೆದ ಹರ್ ಘರ್ ತಿರಂಗಾ