ಬೆಳ್ತಂಗಡಿ(ದಕ್ಷಿಣ ಕನ್ನಡ): ಉಜಿರೆಯ ಬಿಜೋಯ್ ಏಜೆನ್ಸಿಸ್ ಮಾಲೀಕ, ಉದ್ಯಮಿ ಬಿಜೋಯ್ ಅವರ ಪುತ್ರ 8 ವರ್ಷದ ಅನುಭವ್ ನನ್ನ ನಿನ್ನೆ ಸಂಜೆ ಬಿಳಿ ಇಂಡಿಕಾ ಕಾರಿನಲ್ಲಿ ಮನೆಯ ಗೇಟ್ ಬಳಿಯಿಂದ ಅಪಹರಿಸಲಾಗಿದೆ.
ಇದೀಗ ಅಪಹರಣಕಾರರು 17 ಕೋಟಿ ರೂ. ನೀಡುವಂತೆ ಬೇಡಿಕೆಯನ್ನು ಇರಿಸಿದ್ದಾರೆ ಎಂದು ಬಾಲಕನ ಅಜ್ಜ ಎಕೆ ಶಿವನ್ ಅವರು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಎಕೆ ಶಿವನ್ ಅವರು ವಾಕಿಂಗ್ ಹೋಗಿದ್ದಾಗ ಮೊಮ್ಮಗ ಆಟವಾಡಿ ಅಜ್ಜನ ಎದುರಿನಿಂದ ಮನೆ ಕಡೆಗೆ ಹೋಗುತ್ತಿದ್ದ. ಮನೆಯ ಗೇಟು ಬಳಿ ತಲುಪುತ್ತಿದ್ದಂತೆ ಅಲ್ಲಿಯೆ ನಿಂತಿದ್ದ ಬಿಳಿ ಬಣ್ಣದ ಇಂಡಿಕಾ ಕಾರಿನಿಂದ ಇಬ್ಬರು ಅಪರಿಚಿತರು ಇಳಿದು ಬಾಲಕನನ್ನು ಬಲವಂತದಿಂದ ಕಾರಿಗೆ ಹತ್ತಿಸಿಕೊಂಡಿದ್ದಾರೆ.
ಶಿವನ್ ಓಡಿ ಬಂದುಕಾರಿನ ಬಾಗಿಲು ತೆಗೆಯಲು ಪ್ರಯತ್ನಿಸುವ ವೇಳೆಗೆ ಕಾರನ್ನು ಚಲಾಯಿಸಿಕೊಂಡು ರಥ ಬೀದಿ ಕಡೆಗೆ ತೆರಳಿದ್ದಾರೆ. ಬಳಿಕ ಶಿವನ್ ಅವರ ಸೊಸೆಗೆ ಅಪಹರಣಕಾರರು ಪೋನ್ ಮಾಡಿ ಮಗನನ್ನು ಬಿಡಿಸಲು 100 ಬಿಟ್ ಕಾಯಿನ್ ಅಂದರೆ 17 ಕೋಟಿ ರೂ. ಬೇಡಿಕೆ ಇಟ್ಟಿರುವುದಾಗಿ ಶಿವನ್ ಅವರು ದೂರಿನಲ್ಲಿ ತಿಳಿಸಿದ್ದಾರೆ. ಬೆಳ್ತಂಗಡಿ ಠಾಣೆಗೆ ಬಾಲಕನ ಅಜ್ಜ ಎ ಕೆ ಶಿವನ್ ದೂರು ನೀಡಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.