ಮಂಗಳೂರು : ಕರ್ನಾಟಕ ಈಜು ಸಂಸ್ಥೆಯ ವತಿಯಿಂದ ಬೆಂಗಳೂರಿನ ಬಸವನಗುಡಿ ಸ್ವಿಮ್ಮಿಂಗ್ ಕ್ಲಬ್ ಈಜುಕೊಳದಲ್ಲಿ ನಡೆದ ಜೂನಿಯರ್ ಹಾಗೂ ಸಬ್ ಜೂನಿಯರ್ ಚಾಂಪಿಯನ್ ಶಿಪ್ನಲ್ಲಿ ಮಂಗಳೂರಿನ ಏಳು ಮಂದಿ ಚಿಣ್ಣರು ಒಟ್ಟು ಮೂರು ಪದಕ ಬಾಚಿಕೊಂಡಿದ್ದಾರೆ. ಇದೇ ಸ್ಪರ್ಧಿಗಳು ಅ.19ರಂದು ಬೆಂಗಳೂರಿನ ಬಿಎಸಿ ಈಜುಕೊಳದಲ್ಲಿ ಭಾರತೀಯ ಈಜು ಕೂಟದಿಂದ ನಡೆಯುವ ರಾಷ್ಟ್ರಮಟ್ಟದ ಈಜು ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಮಂಗಳೂರಿನ 'ಸಂತ ಅಲೋಶಿಯಸ್ ವಿ ಒನ್ ಅಕ್ವಾ ಸೆಂಟರ್ ಸ್ವಿಮ್ಮಿಂಗ್ ಪೂಲ್'ನ ವಿದ್ಯಾರ್ಥಿಗಳಾಗಿರುವ ಈ 7 ಮಂದಿ ಸ್ಪರ್ಧಿಗಳು ರಾಜ್ಯ ಮಟ್ಟದಲ್ಲಿ ಸ್ಪರ್ಧಿಸಿ ತಲಾ 13 ಬಂಗಾರ, 13 ಬೆಳ್ಳಿ ಹಾಗೂ 7 ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಈ ಮೂಲಕ ಮೊದಲ ಬಾರಿಗೆ ಜೂನಿಯರ್ ಹಾಗೂ ಸಬ್ ಜೂನಿಯರ್ ಚಾಂಪಿಯನ್ಶಿಪ್ನಲ್ಲಿ ಮಂಗಳೂರಿಗೆ 33 ಪದಕ ಲಭಿಸಿವೆ.
ಈ ಈಜು ವಿದ್ಯಾರ್ಥಿಗಳಲ್ಲಿ ಎಲಿಸ್ಸಾ ಎಸ್ ರೇಗೊ ವೈಯುಕ್ತಿಕ ಚಾಂಪಿಯನ್‌ಶಿಪ್ ಪಡೆದುಕೊಂಡರೆ, ಧೃತಿ ಫರ್ನಾಂಡಿಸ್ 4×200 ರಿಲೇ ವಿಭಾಗದಲ್ಲಿ ಹೊಸ ಕೂಟ ದಾಖಲೆ ಸೃಷ್ಟಿಸಿದ್ದಾರೆ. ಜೊತೆಗೆ ನೈತಿಕ್ ಎನ್., ಅಲೈಸ್ಟರ್ ಸ್ಯಾಮ್ಯುಯೆಲ್ ರೇಗೊ, ಸ್ಟೀವ್ ಜೆಫ್ ರೇಗೊ, ನಿಶಾನ್, ದ್ವೀಶಾ ಶೆಟ್ಟಿ ರಾಜ್ಯಮಟ್ಟದಲ್ಲಿ ಸಾಧನೆ ಮಾಡಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಈ ಈಜು ಪಟುಗಳಿಗೆ ಬೆಂಗಳೂರಿನ ಡಾಲ್ಫಿನ್ ಎಕ್ವಾಟಿಕ್ ಕ್ಲಬ್ ತರಬೇತುದಾರರು ಮತ್ತು ದ್ರೋಣಾಚಾರ್ಯ ಪ್ರಶಸ್ತಿ ವಿಜೇತರಾದ ನಿಹಾರ್ ಅಮೀನ್ ಮತ್ತು ಮಧು ಕುಮಾರ್ ಮುಖ್ಯ ತರಬೇತುದಾರ ಲೋಕರಾಜ್ ವಿಟ್ಲ ಹಾಗೂ ಯಜ್ಞೇಶ್ ಬೆಂಗ್ರೆ, ಉಮೇಶ್ ವಿಟ್ಲ, ದೀಪಕ್ ತರಬೇತಿ ನೀಡಿದ್ದಾರೆ.
ಇದನ್ನೂ ಓದಿ: ಜಪಾನ್ನ ಈಜು ಸ್ಪರ್ಧೆಗೆ ತೆರಳಲಿದ್ದಾರೆ ಶಿವಮೊಗ್ಗದ ಈಜುಪಟುಗಳು