ಮಂಗಳೂರು: 370ನೇ ವಿಧಿಯನ್ನು ತೆಗೆದು ಹಾಕುವ ಮೂಲಕ ಏಳು ದಶಕಗಳ ಹಿಂದೆ ನಡೆದ ಐತಿಹಾಸಿಕ ಪ್ರಮಾದವನ್ನು ಮೋದಿ ಸರ್ಕಾರ ಸರಿಪಡಿಸಿದೆ ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.
ಕಡಬದದಲ್ಲಿ ಆಯೋಜಿಸಲಾಗಿದ್ದ 'ಆರಿತು ಕಾಶ್ಮೀರದ ಬೆಂಕಿ' ಎಂಬ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ಆರ್ಟಿಕಲ್ 370 ತೆಗೆಯುವ ಬಗ್ಗೆ ಪಾಕಿಸ್ತಾನ, ಕಾಶ್ಮೀರ, ಕೆಲ ಮಾಧ್ಯಮಗಳ ಪತ್ರಕರ್ತರು ಸೇರಿದಂತೆ ಹಲವರು ಸವಾಲೆಸೆದಿದ್ದರು. ಆದರೆ ಆರ್ಟಿಕಲ್ ರದ್ದುಪಡಿಸಿದ ಬಳಿಕ ಸವಾಲು ಹಾಕಿದ್ದ ಕಾಂಗ್ರೆಸ್ ಕೂಡಾ ಬೆಂಬಲ ತೋರಿಸಿದೆ ಎಂದರು.
ಒಂದು ರಾಷ್ಟ್ರದ ಸಾರ್ವಭೌಮತೆಯ ಚಿಂತನೆ ಬಂದಾಗ ಇಡೀ ಭಾರತದ ಅಷ್ಟೂ ರಾಜ್ಯ, ಈ ರಾಷ್ಟ್ರದ 130 ಕೋಟಿ ಜನರು ಕಾಶ್ಮೀರದಲ್ಲಿರುವ ಜನರಿಗೆ ಬೆದರಿ ಕುಳಿತುಕೊಳ್ಳುವ ಪರಿಸ್ಥಿತಿ ಇತ್ತು. ಈಗ ಬೆದರುವ ಕಾಲ ಹೋಯ್ತು. ಇದೀಗ ಪಾಠ ಕಲಿಸುವ ಕಾಲ. ಪ್ರಧಾನಿ ಮೋದಿ ಕೈಗೊಂಡ ನಿರ್ಣಯ ಶ್ಲಾಘನೀಯ ಎಂದು ಚಕ್ರವರ್ತಿ ಸೂಲಿಬೆಲೆ ಅಭಿಪ್ರಾಯಪಟ್ಟರು.