ಬಂಟ್ವಾಳ(ದಕ್ಷಿಣ ಕನ್ನಡ): ಒಂದೆಡೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಈ ಮಧ್ಯೆ ಪಾಣೆಮಂಗಳೂರಿನಲ್ಲಿ ಊದುಬತ್ತಿ ಕಡ್ಡಿಗಳಿಂದ ರಾಮಮಂದಿರದ ಪ್ರತಿಕೃತಿ ನಿರ್ಮಾಣಗೊಂಡಿದೆ. ಲಾಕ್ಡೌನ್ ಸಮಯ ಸದುಪಯೋಗಪಡಿಸಿಕೊಂಡ ವಿಜೇತ್ ನಾಯಕ್ ಈ ಕೆಲಸವನ್ನು ಕೇವಲ ಮೂರು ತಿಂಗಳಿನಲ್ಲಿ ಮಾಡಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಈ ಕುರಿತು ಪತ್ರವನ್ನು ಬರೆದಿರುವ ವಿಜೇತ್, ಪ್ರಧಾನಿಯವರಿಗೆ ರಾಮಮಂದಿರದ ಈ ಪ್ರತಿಕೃತಿಯನ್ನು ಒಪ್ಪಿಸಲು ಇಚ್ಛಿಸಿದ್ದಾರೆ. ಸದ್ಯ ಪಡುಬಿದ್ರಿಯಲ್ಲಿ ಉದ್ಯೋಗದಲ್ಲಿರುವ ಮೇಲ್ಕಾರ್ ಸಮೀಪದ ಪಾಣೆಮಂಗಳೂರು ನಿವಾಸಿ ವಿಜೇತ್, ಈ ರಾಮಮಂದಿರಕ್ಕೆ ಸುಮಾರು 2 ಕೆಜಿಯಷ್ಟು ಬಣ್ಣಬಣ್ಣದ ಊದುಬತ್ತಿ ಕಡ್ಡಿಗಳು, ಸ್ವಲ್ಪ ರಟ್ಟಿನ ಬಾಕ್ಸ್ ಹಾಗೂ ಗಟ್ಟಿಯಾಗಿ ನಿಲ್ಲಲು ಪ್ಲೈವುಡ್ ಉಪಯೋಗಿಸಿದ್ದಾರೆ. ಇವುಗಳನ್ನು ಅಂಟಿಸಲು ಫೆವಿಕಾಲ್ ಗಮ್ ಜೊತೆಗೆ ಅಲಂಕಾರಿಕವಾಗಿ ಸಣ್ಣ ಬಲ್ಬ್ಗಳನ್ನು ಅಳವಡಿಸಿದ್ದಾರೆ. ಇಡೀ ರಾಮಮಂದಿರದ ಪ್ರತಿಕೃತಿಗೆ ವಾರ್ನಿಶ್ ನಿಂದ ಹೊಳಪು ನೀಡಿದ್ದಾರೆ.
ಇದು ಹಾಳಾಗದಂತೆ ಗಾಜಿನ ಹೊದಿಕೆಯನ್ನು ಹಾಕಲಾಗಿದ್ದು, ಲೈಟ್ ಹಾಕಿದರೆ, ಥೇಟ್ 3Dಯ ಪ್ರತಿಕೃತಿಯಂತೆಯೇ ಕಾಣಿಸುತ್ತದೆ. ಈ ರೀತಿಯಾಗಿ ರಾಮಮಂದಿರದ ಪ್ರತಿಕೃತಿಯನ್ನು ಮಾಡಿರುವ ವಿಜೇತ್ ನಾಯಕ್ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿಯೂ ಹರಿದಾಡುತ್ತಿದೆ. ಸಾರ್ವಜನಿಕರಿಂದ ಹಾಗೂ ರಾಮಭಕ್ತರಿಂದ ಸಾಕಷ್ಟು ಪ್ರಶಂಸೆಗೂ ಪಾತ್ರವಾಗಿದೆ. ರಾಮಮಂದಿರದೊಳಗೆ ರಾಮನ ಮೂರ್ತಿಯ ಚಿತ್ರವನ್ನೂ ಹಾಕಿರುವುದು ವಿಶೇಷ.
ಇದಕ್ಕೆ ಅಳವಡಿಸಲಾದ ಬಲ್ಬಗಳನ್ನು ಉರಿಸಿದರೆ ಸಾಕ್ಷಾತ್ ರಾಮಮಂದಿರವೇ ಲೈಟಿಂಗ್ಸ್ನಲ್ಲಿ ಕಂಗೊಳಿಸುತ್ತಿರುವಂತೆ 3D ರೀತಿ ಕಾಣಿಸುತ್ತದೆ. ''ಲಾಕ್ಡೌನ್ ಶುರುವಾಗುವ ಮೊದಲು ಮಾರ್ಚ್ 15ರಂದು ಇದನ್ನು ಶುರುಮಾಡಿದೆ. ಜೂನ್ 15ರಲ್ಲಿ ಪೂರ್ಣಗೊಂಡಿತು. ಸುಮಾರು 2ಕೆಜಿ ಊದುಬತ್ತಿ ಬಳಸಲಾಗಿದೆ, ತಳಪಾಯಕ್ಕೆ ಗಟ್ಟಿ ನಿಲ್ಲಲು ಪ್ಲೈವುಡ್ ಹಾಕಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ನೀಡಲು ಪತ್ರ ಬರೆದಿದ್ದು, ಅವರ ಒಪ್ಪಿಗೆ ಇದ್ದರೆ, ಪ್ರಧಾನಿಗೆ ಇದನ್ನು ತಲುಪಿಸುವೆ'' ಎನ್ನುತ್ತಾರೆ ನಾಯಕ್.