ಕಲಬುರಗಿ: ಮನೆಯಲ್ಲಿ ಅಣ್ಣನ ಜೊತೆ ತಮ್ಮ ಊಟಕ್ಕೆ ಕುಳಿತಿದ್ದ ವೇಳೆ ಏಕಾಏಕಿ ರೌಡಿಗಳ ಗುಂಪು ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ನಗರದ ಡಬರಾಬಾದ್ ಅಪಾರ್ಟ್ಮೆಂಟ್ನಲ್ಲಿ ಬುಧವಾರ ಬೆಳಗ್ಗೆ ನಡೆದಿದೆ. ಇದೇ ವೇಳೆ ಅಣ್ಣನಿಗೂ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಹೇಶ್ ಎಂಬಾತನೆ ದುಷ್ಕರ್ಮಿಗಳಿಂದ ಬರ್ಬರವಾಗಿ ಕೊಲೆಯಾದ ಯುವಕ. ಈತನ ಸಹೋದರ ಕಿರಣ್ಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆರೋಪಿಗಳಾದ ಸಾಗರ್ ಹಾಗೂ ಸಹಚರರು ಕೃತ್ಯೆಸಗಿದ್ದಾರೆ. ಮಹೇಶ್ ಮೇಲೆ ಹಲ್ಲೆ ನಡೆಸಿ, ಚಾಕುವಿನಿಂದ ಕತ್ತು ಕೊಯ್ದು ಕೊಲೆ ಮಾಡಲಾಗಿದೆ. ಈ ವೇಳೆ ತಮ್ಮನ ರಕ್ಷಣೆಗೆ ಬಂದ ಕಿರಣ್ ಮೇಲೆಯೂ ಹಲ್ಲೆ ನಡೆಸಲಾಗಿದೆ.
ಹೊಡೆದಾಟದಲ್ಲಿ ಪ್ರಮುಖ ಆರೋಪಿಯಾದ ಸಾಗರ್ ಹಾಗೂ ಆತನ ಸಹಚರನೋರ್ವನಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನುಳಿದ ಆರೋಪಿಗಳು ಪರಾರಿಯಾಗಿದ್ದಾರೆ.
ರೌಡಿಸಂನಲ್ಲಿ ಹೆಸರು ಮಾಡಬೇಕೆಂದು ಕೃತ್ಯ?:
ಆರೋಪಿ ಸಾಗರ್ ಕೂಡ ಡಬರಾಬಾದ್ ನಿವಾಸಿಯಾಗಿದ್ದು, ಏರಿಯಾದಲ್ಲಿ ರೌಡಿಸಂನಲ್ಲಿ ಹೆಸರು ಮಾಡಬೇಕು ಅಂತಾ ಕಂಡ ಕಂಡವರ ಮೇಲೆ ಹಲ್ಲೆ ಮಾಡುತ್ತಿದ್ದ. ಸಂಜೆಯಾದ ಕೂಡಲೆ ತನ್ನ ಗ್ಯಾಂಗ್ ಕಟ್ಟಿಕೊಂಡು ಗಾಂಜಾ ನಶೆಯಲ್ಲಿ ಏರಿಯಾದಲ್ಲಿನ ಜನರಿಗೆ ತೊಂದರೆ ನೀಡುತ್ತಿದ್ದ ಎನ್ನಲಾಗಿದೆ. ಕಳೆದ ಎರಡು ತಿಂಗಳ ಹಿಂದೆ ಕೊಲೆಯಾದ ಮಹೇಶ್ ತಾಯಿ ಮಲ್ಲಮ್ಮ ಕೆಲಸ ಮುಗಿಸಿಕೊಂಡು ಮನೆಗೆ ಬರುವಾಗ ಸಾಗರ್ ಹಾಗೂ ಆತನ ಸಹಚರರು ನಡುರಸ್ತೆಯಲ್ಲಿ ನಿಂತಿದ್ದರು. ಆಗ ದಾರಿ ಬಿಡಿ ಅಂದಿದ್ದಕ್ಕೆ ಮಲ್ಲಮ್ಮಳ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದರು.
ಈ ಸಂಬಂಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಆದರೆ ದೂರು ದಾಖಲಾಗುತ್ತಿದ್ದಂತೆ ಸಾಗರ್, ಸಹಚರರು ಪರಾರಿಯಾಗಿದ್ದರು. ಅದಾದ ಬಳಿಕ ಏರಿಯಾಗೆ ಎಂಟ್ರಿ ಕೊಟ್ಟ ಮರುದಿನವೇ ಬುಧವಾರ ಬೆಳಗ್ಗೆ ಏಕಾಏಕಿ ಮನೆಗೆ ನುಗ್ಗಿ ಕೃತ್ಯವೆಸಗಿದ್ದಾರೆ.
ಮನೆಯವರ ಆಕ್ರಂದನ:
ರೌಡಿಗಳ ಅಟ್ಟಹಾಸಕ್ಕೆ ಒಬ್ಬ ಮಗನನ್ನು ಕಳೆದುಕೊಂಡು, ಮತ್ತೊಬ್ಬ ಮಗ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವುದನ್ನು ಕಂಡ ಮನೆಯವರ ಆಕ್ರಂದನ ಮುಗಿಲುಮುಟ್ಟಿತ್ತು. ಆಸ್ಪತ್ರೆಯ ಮುಂಭಾಗದಲ್ಲಿ ಮಲ್ಲಮ್ಮ ಹಾಗೂ ಮನೆಯವರು ಕಣ್ಣೀರು ಹಾಕುತ್ತಿದ್ದರು.
ಆರೋಪಿಗಳು ವಶಕ್ಕೆ:
ಘಟನೆ ಸಂಬಂಧ ಕಲಬುರಗಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಾಗರ್ ಮತ್ತು ಆತನ ಒಬ್ಬ ಸ್ನೇಹಿತನನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಲು ಮುಂದಾಗಿದ್ದಾರೆ.