ಬೀದರ್/ಬಾಗಲಕೋಟೆ/ಕಲಬುರಗಿ: ಕಲ್ಯಾಣ ಕರ್ನಾಟಕದ ರೈತರಲ್ಲಿ ಎಳ್ಳು ಅಮಾವಾಸ್ಯೆ ಸಂಭ್ರಮ ಕಳೆಗಟ್ಟಿದೆ. ವಿವಿಧೆಡೆ ಎಳ್ಳು ಅಮಾವಾಸ್ಯೆಯ ಪ್ರಯುಕ್ತ ರೈತರು ಕುಟುಂಬದ ಸದಸ್ಯರೊಂದಿಗೆ ತಮ್ಮ ಹೊಲಗಳಿಗೆ ತೆರಳಿ ಪಾಂಡವರ ಪ್ರತಿಮೆ ಹಾಗೂ ಭೂದೇವಿಗೆ ವಿಶೇಷ ಪೂಜೆ ಸಲ್ಲಿಸಿ ಮಳೆ, ಬೆಳೆ ಉತ್ತಮವಾಗಿ ಬರಲಿ ಎಂದು ಪ್ರಾರ್ಥಿಸಿದರು.
ಬೀದರ್, ಬಾಗಲಕೋಟೆ, ಕಲಬುರಗಿ ಸೇರಿದಂತೆ ಉತ್ತರ ಕರ್ನಾಟಕದಾದ್ಯಂತ ಹೊಲಗಳಲ್ಲಿ ಬೆಳೆದ ವಿವಿಧ ಧಾನ್ಯ, ತರಕಾರಿ ಮಿಶ್ರಣದ ಭಜ್ಜಿ, ಜೋಳದ ಕಡುಬು ಸಿದ್ಧಪಡಿಸಿದ ರೈತರು, ಚರಗ ಚೆಲ್ಲುವ ಮೂಲಕ ಭೂ ತಾಯಿಗೆ ಗೌರವ ಸಮರ್ಪಿಸಿದರು. ಹೊಲದಲ್ಲಿಯೇ ವೈವಿಧ್ಯಯಮ ಭಕ್ಷ್ಯಗಳನ್ನು ಸಿದ್ಧಪಡಿಸಿ, ಸಹಪಂಕ್ತಿಯಲ್ಲಿ ಕುಳಿತು ಸವಿದರು.
ಎಳ್ಳು ಅಮಾವಾಸ್ಯೆ ಉತ್ತರ ಕರ್ನಾಟಕದ ಪ್ರಸಿದ್ಧ ಹಬ್ಬ. ಎಲ್ಲರ ಜೀವನಾಧಾರ ಎನಿಸಿರುವ ಭೂ ಮಾತೆಗೆ ಪೂಜೆ ಸಲ್ಲಿಸಲು ಈ ಹಬ್ಬವನ್ನು ಶತಮಾನಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಹೆಣ್ಣು ಗರ್ಭ ಧರಿಸಿದಾಗ ಆಕೆಯ ಅಪೇಕ್ಷೆಗೆ ಅನುಗುಣವಾಗಿ ವೈವಿಧ್ಯಮಯ ಖಾದ್ಯಗಳನ್ನು ಸಿದ್ಧಪಡಿಸಿ ಸೀಮಂತ ಕಾರ್ಯಕ್ರಮ ನೆರವೇರಿಸಲಾಗುತ್ತದೆ. ಅದೇ ರೀತಿ ಎಳ್ಳ ಅಮಾವಾಸ್ಯೆ ದಿನ ಭೂ ತಾಯಿಗೂ ಸೀಮಂತದಂತಹ ಕಾರ್ಯಕ್ರಮ ಮಾಡಲಾಗುತ್ತದೆ. ವೈವಿಧ್ಯಮಯ ಖಾದ್ಯಗಳನ್ನು ಸಿದ್ಧಪಡಿಸಿ ಚರಗ ಚೆಲ್ಲಲಾಗುತ್ತದೆ.
ಹೊಲದಲ್ಲಿ ಬೆಳೆದ ಧಾನ್ಯ, ತರಕಾರಿಗಳಿಂದ ಭಜ್ಜಿ ಸಿದ್ಧಪಡಿಸಿ, ಜೋಳ ಮತ್ತು ಸಜ್ಜೆಯ ಕಡುಬುಗಳನ್ನು ತಯಾರಿಸಿ, ಚರಗ ಚೆಲ್ಲಿದ ನಂತರ ಅದೇ ಭಕ್ಷ್ಯಗಳನ್ನು ಸಾಮೂಹಿಕ ಪಂಕ್ತಿಯಲ್ಲಿ ಕುಳಿತು ಸವಿಯಲಾಗುತ್ತೆ. ಈ ಅಮಾವಾಸ್ಯೆಯ ದಿನದಂದು ವಿಶಿಷ್ಟವಾದ ಅಡುಗೆ ಮಾಡಿ ನಮಗೆ ಬೇಕಾದ ಬೀಗರು-ಬಂಧು ಬಳಗ, ಸ್ನೇಹಿತರು ಹಾಗೂ ಅಕ್ಕ-ಪಕ್ಕದ ಮನೆಯವರನ್ನು ಹೂಲಕ್ಕೆ ಕರೆದೊಯ್ದು ಸಾಮೂಹಿಕವಾಗಿ ಊಟ ಮಾಡುತ್ತೇವೆ. ಭೂಮಿಗೆ ಪೂಜೆ ಸಲ್ಲಿಸುವುದರೊಂದಿಗೆ ಪ್ರೀತಿ, ಬಾಂಧವ್ಯ ಬೆಸೆಯುತ್ತವೆ ಎನ್ನುತ್ತಾರೆ ಅಭಿಪ್ರಾಯ ರೈತರದ್ದು.
ಎಳ್ಳು ಮತ್ತು ಶೇಂಗಾ ಹೋಳಿಗೆ, ಜೋಳ, ಅವರೆ ಕಾಳಿನ ಭಜ್ಜಿ, ಸಜ್ಜೆಯ ಖಡಕ್ ರೊಟ್ಟಿ, ಚಪಾತಿ, ಎಣ್ಣೆ ಬದನೆಕಾಯಿ ಪಲ್ಲೆ, ಹೆಸರು, ಮಡಿಕೆ ಕಾಳುಗಳ ಪಲ್ಲೆ, ಮಿರ್ಚಿ ಬಜಿ, ಸಂಡಿಗೆ, ಅನ್ನ, ಸಾಂಬಾರುಗಳನ್ನು ಎಲ್ಲರೂ ಸಾಮೂಹಿಕ ಭೋಜನ ಸವಿದು ಬಾಂಧವ್ಯ ಮೆರೆದರು. ಹೊಲವಿಲ್ಲದವರೂ ಪಾರ್ಕ್ ಗಳಿಗೆ ತೆರಳಿ ಸಹ ಪಂಕ್ತಿ ಭೋಜನ ನಡೆಸಿದರು. ಎಳ್ಳ ಅಮವಾಸ್ಯೆಯನ್ನು ಸಂತೋಷದಿಂದ ಆಚರಿಸಿದ ರೈತ ಸಮುದಾಯದವರು ಎಂಥಹ ಕಷ್ಟ, ನಷ್ಟಗಳೇ ಬರಲಿ ನಮ್ಮ ಸಂಸ್ಕೃತಿ, ಪರಂಪರೆ, ಸಾಂಪ್ರದಾಯಿಕ ಪದ್ಧತಿ ಆಚರಣೆಗಳನ್ನು ಮರೆಯೋದಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.