ಕಲಬುರಗಿ: ನಮಗೆ ಪೂರ್ಣ ಬಹುಮತವಿಲ್ಲ. ಕೆಲ ಶಾಸಕರ ರಾಜೀನಾಮೆಯಿಂದ ನಾವು ಸರ್ಕಾರ ರಚಿಸಿದ್ದೇವೆ. ಹೀಗಾಗಿ ಎಲ್ಲರಿಗೂ ಸಚಿವ ಸ್ಥಾನ ನೀಡಲಾಗಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅಭಿಪ್ರಾಯಪಟ್ಟಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, 16 ಅನರ್ಹ ಶಾಸಕರ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿಯೇ ಬಾಕಿಯಿದೆ. ಹೀಗಿರಬೇಕಾದರೆ ನಾವು ಎಲ್ಲಾ ಖಾತೆಗಳನ್ನೂ ಭರ್ತಿ ಮಾಡಲಾಗುವುದಿಲ್ಲ. ನಮಗೆ ಪೂರ್ಣ ಬಹುಮತ ಕೊಟ್ಟಿದ್ದರೆ ಕುಮಾರಸ್ವಾಮಿಯನ್ನು ಮುಖ್ಯಮಂತ್ರಿಯಾಗಲು ಬಿಡುತ್ತಿದ್ದೆವಾ ಎಂದು ಪ್ರಶ್ನಿಸಿದರು.
ಸದ್ಯ ನಾವು ಸರ್ಕಾರ ರಚಿಸಿದ್ದೇವೆ, ಅನರ್ಹ ಶಾಸಕರ ಪ್ರಕರಣದ ವಿಚಾರಣೆಯೂ ಶೀಘ್ರದಲ್ಲಿ ನಡೆಯಲಿದೆ. ಇದೆಲ್ಲವೂ ಮುಗಿದ ನಂತರ ಕಲ್ಯಾಣ ಕರ್ನಾಟಕ ಭಾಗಕ್ಕೂ ಸಚಿವ ಸ್ಥಾನ ಸಿಗಲಿದೆ. ಉಳಿದ ಸಚಿವ ಸ್ಥಾನಾಕಾಂಕ್ಷಿಗಳೂ ಸಂಪುಟ ಸೇರ್ಪಡೆಗೊಳ್ಳಲಿದ್ದಾರೆ, ಕಾದು ನೋಡಿ ಎಂದ ಕಟೀಲ್, ಮುಂದೆ ಮಧ್ಯಂತರ ಚುನಾವಣೆ ನಡೆಯಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿ ಅಲ್ಲಿಂದ ಹೊರಟು ಹೋದರು.
ಯಡಿಯೂರಪ್ಪ ಹೇಗೆ ಬಲಹೀನರಾಗ್ತಾರೆ?: ಕಟೀಲ್ ಪ್ರಶ್ನೆ
ಯಡಿಯೂರಪ್ಪ ಅವರನ್ನು ಬಲಹೀನ ಮಾಡಿಲ್ಲ, ಅವರೇ ಮುಖ್ಯಮಂತ್ರಿ ಅಂದ ಮೇಲೆ ಹೇಗೆ ಬಲಹೀನರಾಗುತ್ತಾರೆ? ಮುಖ್ಯಮಂತ್ರಿ ಯಡಿಯೂರಪ್ಪ ನಮ್ಮೆಲ್ಲರ ನಾಯಕರಾಗಿದ್ದಾರೆ. ಅವರ ಕೈ ಕೆಳಗೆ ನಾವೆಲ್ಲ ಕೆಲಸ ಮಾಡುತ್ತಿದ್ದೇವೆ. ಹೀಗಿರಬೇಕಾದರೆ ಅವರನ್ನು ಬಲಹೀನ ಮಾಡಿದ್ದಾರೆ ಎಂಬುದು ಶುದ್ಧ ಸುಳ್ಳು. ಅವರ ಮಾರ್ಗದರ್ಶನದಲ್ಲಿಯೇ ಪಕ್ಷ ಬಲವರ್ಧನೆ ಮಾಡುತ್ತಿದ್ದೇನೆ ಎಂದು ಇದೇ ವೇಳೆ ಕಟೀಲ್ ತಿಳಿಸಿದರು.