ಕಲಬುರಗಿ: ತಗ್ಗು ಗುಂಡಿಯಲ್ಲಿ ಆಟವಾಡಲು ಇಳಿದ ಮೂವರು ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಗರದ ಮಹಾಲಕ್ಷ್ಮಿ ಲೇಔಟ್‌ನಲ್ಲಿ ನಡೆದಿದೆ. ಮಹಾಲಕ್ಷ್ಮಿ ಲೇಔಟ್‌ನಲ್ಲಿ ಮಹಾಜನ್ ಎಂಬುವರು ಮನೆ ಕಟ್ಟಲು ಕಳೆದೆರಡು ದಿನಗಳ ಹಿಂದೆ ಗುಂಡಿ ತೋಡಿದ್ದರು. ಆದರೆ ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ನಿರ್ಮಾಣ ಹಂತದ ಕಟ್ಟಡದ ತಗ್ಗುಗುಂಡಿ ತುಂಬಿ ಹೋಗಿದೆ.
ನಿನ್ನೆ ಬೆಳಗ್ಗೆ ಮೂವರು ಬಾಲಕರಾದ ಪ್ರಶಾಂತ (10), ದರ್ಶನ್ (12) ಮತ್ತು ವಿಘ್ನೇಶ್ (9) ಆಟವಾಡಲು ನೀರಿಗಿಳಿದಿದ್ದಾರೆ. ಈ ವೇಳೆ ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.ಬೆಳಕಿನ ಹಬ್ಬ ದೀಪಾವಳಿ ಸಂಭ್ರಮದಲ್ಲಿದ್ದ ಕುಟುಂಬಗಳಲ್ಲಿ ಇದೀಗ ಕಾರ್ಮೋಡ ಆವರಿಸಿದ್ದು, ಮಕ್ಕಳನ್ನ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ನ್ಯೂ ರಾಘವೇಂದ್ರ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇನ್ನು ದೊಡ್ಡ ಮನೆ ಕಟ್ಟುವುದಕ್ಕೆ ಆಳವಾದ ಬುನಾದಿ ತೋಡಿದ್ದು, ಅದರ ಸುತ್ತಲು ಬ್ಯಾರೀಕೆಡ್ ಹಾಕದಿರುವುದರಿಂದ ಈ ದುರಂತ ಸಂಭವಿಸಿದೆ ಎಂದು ಪೋಷಕರು ಮನೆ ಮಾಲೀಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಕೂಡಲೇ ಕಟ್ಟಡ ಮಾಲೀಕರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.