ಕಲಬುರಗಿ : ಇಲ್ಲಿನ ಪ್ರಾರ್ಥನಾ ಮಂದಿರದಲ್ಲಿರುವ ಶಿವಲಿಂಗ ಪೂಜೆಗೆ ಸಂಬಂಧಿಸಿದಂತೆ ಆಳಂದ ನಗರದಲ್ಲಿ ಎರಡು ಗುಂಪುಗಳ ಮಧ್ಯೆ ಭಾರಿ ಗಲಾಟೆಯಾಗಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಅಲ್ಲದೇ ಸಂಸದ, ಶಾಸಕರು, ಪೊಲೀಸ್, ಮಾಧ್ಯಮದವರ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ.
ಬೀದರ್ ಲೋಕಸಭಾ ಸದಸ್ಯ ಭಗವಂತ ಖೂಬಾ, ಶಾಸಕ ಬಸವರಾಜ ಮತ್ತಿಮೂಡ, ರಾಜಕುಮಾರ ಪಾಟೀಲ್ ತೆಲ್ಕೂರ ಮತ್ತು ಸುದ್ದಿ ಮಾಧ್ಯಮದವರ ವಾಹನಗಳು ಸೇರಿದಂತೆ ಕಂಡ ಕಂಡ ವಾಹನಗಳನ್ನು ಕಲ್ಲು ತೂರಿ ಜಖಂ ಮಾಡಲಾಗಿದೆ.
ಆಳಂದ ಪಟ್ಟಣದಲ್ಲಿ ಪರಿಸ್ಥಿತಿ ಕೈಮೀರಿದ್ದು, ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು. ಈ ವೇಳೆ ಒಂದು ಗುಂಪಿನ ಉದ್ರಿಕ್ತರು ಪೊಲೀಸರ ಮೇಲೆಯೇ ಕಲ್ಲು ತೂರಾಡಿದ್ದಾರೆ. ಇದರಿಂದ ಹಲವರಿಗೆ ಕಲ್ಲೇಟಿನಿಂದ ಗಾಯವಾಗಿದೆ.
10 ಜನರಿಗೆ ಪೂಜೆಗೆ ಅವಕಾಶ : ಪಟ್ಟಣದ ಪ್ರಾರ್ಥನಾ ಸ್ಥಳದಲ್ಲಿರುವ ಶಿವಲಿಂಗಕ್ಕೆ ಶುದ್ದಿ ಹಾಗೂ ಪೂಜೆ ಮಾಡಲು ಹಿಂದು ಕಾರ್ಯಕರ್ತರು ಆಗಮಿಸಿದ್ದರು. ಈ ವೇಳೆ ಪ್ರಾರ್ಥನಾ ಮಂದಿರ ಹೊರಗಡೆ ಭಾರಿ ತಿಕ್ಕಾಟ ಉಂಟಾದಾಗ ಪೊಲೀಸರು, ರಾಜಕೀಯ ನಾಯಕರು ಮಧ್ಯಪ್ರವೇಶಿಸಿ ಒಂದು ಗುಂಪಿನ ಮನವೊಲಿಸಲಾಯಿತು. ಬಳಿಕ 10 ಜನರಿಗೆ ಲಿಂಗ ಶುದ್ಧಿಗೆ ಅವಕಾಶ ನೀಡಲಾಯಿತು.
ನಿಗದಿತ ಜನರು ಪ್ರಾರ್ಥನಾ ಮಂದಿರ ಒಳ ಹೋಗಿ ಪೂಜೆ ಮಾಡಲು ಅವಕಾಶ ಮಾಡಿಕೊಟ್ಟ ಬಳಿಕ ಆಕ್ರೋಶಗೊಂಡ ಒಂದು ಗುಂಪಿನ ಜನರು, ಕಲ್ಲು ತೂರಾಟ ಮಾಡಲು ಆರಂಭಿಸಿದ್ದಾರೆ. ಪಟ್ಟಣದಲ್ಲಿ ಸದ್ಯ ಪ್ರಕ್ಷುಬ್ಧ ವಾತಾವರಣವಿದೆ.