ಕಲಬುರಗಿ : ಬೆಳಕಿನ ಹಬ್ಬ ದೀಪಾವಳಿಗೆ ಮೆರಗು ಸಿಗುವುದು ಪಟಾಕಿ ಮತ್ತು ಹಣತೆಗಳಿಂದ. ಆದರೆ, ಜನರು ಪ್ಲಾಸ್ಟಿಕ್ ಹಣತೆಗೆ ಮೊರೆ ಹೋಗುತ್ತಿರುವುದು ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಮತ್ತು ಮಣ್ಣಿನ ಹಣತೆ ಮೇಲಿನ ಬೇಡಿಕೆ ಕುಗ್ಗುತ್ತಿದೆ. ಇದನ್ನು ತಪ್ಪಿಸಲು ಇಲ್ಲೊಂದು ಗೋಶಾಲೆ ವಿನೂತನ ಪ್ರಯತ್ನಕ್ಕೆ ಕೈ ಹಾಕಿ ಪರಿಸರ ರಕ್ಷಣೆ ಜೊತೆಗೆ ಮಹಿಳೆಯರಿಗೆ ಉದ್ಯೋಗ ನೀಡಿ ಆಸರೆಯಾಗುತ್ತಿದೆ.
ಹಣತೆ ತಯಾರಿಕೆ : ಕಲಬುರಗಿ ಹೊರವಲಯದ ಕುಸನೂರು ಶ್ರೀ ಮಾಧವ ಗೋಶಾಲೆಯಲ್ಲಿ ಹಣತೆಗಳನ್ನು ತಯಾರಿಸಲಾಗುತ್ತಿದೆ. ಗೋವುಗಳ ಸಗಣಿ ಮತ್ತು ಗಂಜಲದಿಂದ ವಿಭೂತಿ, ಔಷಧಿಯಂತಹ ಅನೇಕ ಉಪಯುಕ್ತ ವಸ್ತುಗಳನ್ನು ತಯಾರು ಮಾಡುವ ಈ ಗೋ ಶಾಲೆಯಲ್ಲಿ ಇದೀಗ ಹಣತೆ ತಯಾರಿಕೆ ಮಾಡಲಾಗುತ್ತಿದೆ.
ಮಹಿಳೆಯರಿಗೆ ಉದ್ಯೋಗ : ಸಗಣಿ ಬಳಸಿಕೊಂಡು ಬಗೆಬಗೆಯ ವರ್ಣಗಳಲ್ಲಿ ಹಣತೆ ತಯಾರಿಸಿ ಜನರಿಗೆ ಕಡಿಮೆ ಬೆಲೆಗೆ ನೀಡಲಾಗುತ್ತಿದೆ. ಹತ್ತಾರು ಮಹಿಳೆಯರಿಗೆ ಹಣತೆ ತಯಾರಿಸುವ ತರಬೇತಿ ನೀಡಲಾಗಿದೆ. ಸಗಣಿ ಸೇರಿ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಹೋಗಿ ಮನೆಯಲ್ಲಿಯೇ ಕುಳಿತು ಹಣತೆ ತಯಾರಿಸಿ ಸಂಪಾದನೆ ಮಾಡುತ್ತಿದ್ದಾರೆ. ಗೋಶಾಲೆಯ ಮಾದರಿ ಕಾರ್ಯದಿಂದ ಜನರಿಗೆ ಕಡಿಮೆ ಬೆಲೆಯಲ್ಲಿ ಪರಿಸರ ಸ್ನೇಹಿ ಹಣತೆ ದೊರೆತರೆ, ಇನ್ನೊಂದಡೆ ಮಹಿಳೆಯರಿಗೆ ಉದ್ಯೋಗ ಸಿಕ್ಕಂತಾಗಿದೆ.
ಜಾನುವಾರುಗಳ ಪೋಷಣೆ : ಗೋಶಾಲೆಯ ಹೊಣೆ ಹೊತ್ತಿರುವ ಮಹೇಶ ಬೀದರ್‌ಕರ್, ವೃತ್ತಿಯಲ್ಲಿ ಕಾಲೇಜು ಉಪನ್ಯಾಸಕರಾಗಿದ್ದಾರೆ. ಜಾನುವಾರುಗಳ ಮೇಲಿನ ಪ್ರೀತಿಗೆ ಗೋಶಾಲೆ ಆರಂಭಿಸಿದ್ದಾರೆ. ನೂರಾರು ಜಾನುವಾರುಗಳು ಸದ್ಯ ಗೋಶಾಲೆಯಲ್ಲಿವೆ. ಆದ್ರೆ, ಇವ್ಯಾವು ಖರೀದಿಸಿ ತಂದಿರುವುದಲ್ಲ. ದೈಹಿಕ ಅಂಗಾಂಗ ವೈಫಲ್ಯ, ವೃದ್ಧಾಪ್ಯ ವಯಸ್ಸಿನ ಜಾನುವಾರು, ಅನಾರೋಗ್ಯ ಪೀಡಿತ ಜಾನುವಾರು ಹೀಗೆ ರೈತರಿಗೆ ಉಪಯೋಗಕ್ಕೆ ಬಾರದೆ ಹೊರೆಯಾಗುವ ಜಾನುವಾರುಗಳನ್ನು ತಂದು ಪೋಷಣೆ ಮಾಡುತ್ತಿದ್ದಾರೆ. ಅಗತ್ಯ ಚಿಕಿತ್ಸೆ ಕೊಡಿಸಿ ರಕ್ಷಣೆ ಮಾಡುತ್ತಿದ್ದಾರೆ.
ಚೇತರಿಸಿಕೊಂಡ ಜಾನುವಾರುಗಳನ್ನು ಬಡ ರೈತರಿಗೆ ಕೊಡುತ್ತಾರೆ. ಅಲ್ಲದೇ ಜಾನುವಾರುಗಳ ಸಗಣಿಯಿಂದ ಹಲವು ಪರಿಸರ ಸ್ನೇಹಿ, ಜನರ ಆರೋಗ್ಯ ರಕ್ಷಣೆ ವಸ್ತುಗಳು ತಯಾರಾಗುತ್ತಿವೆ. ಸಗಣಿಯಿಂದ ವಿಭೂತಿ, ಪಾಂಚಜನ್ಯ, ಗಣೇಶಮೂರ್ತಿ, ಉಡುಗೊರೆ ವಸ್ತುಗಳು ಸೇರಿದಂತೆ ಹಲವು ದಿನ ಬಳಕೆ ವಸ್ತುಗಳು ಸಹ ಸಿದ್ದಪಡಿಸಲಾಗುತ್ತಿದೆ. ಇದರಿಂದಾಗಿ ಹಲವರಿಗೆ ಉದ್ಯೋಗ ಕೂಡ ಸಿಕ್ಕಿದೆ.
ಇದನ್ನೂ ಓದಿ: ಲಂಡನ್ನಲ್ಲಿ ಕರ್ನಾಟಕ ಪ್ರವಾಸೋದ್ಯಮ ಮಳಿಗೆ ಉದ್ಘಾಟನೆ
ಮಾಧವ ಗೋಶಾಲೆ ಕೇವಲ ಗೋ ರಕ್ಷಣೆಗೆ ಮಾತ್ರ ಸೀಮಿತವಾಗಿರದೆ ಹಲವು ಬಗೆಯ ವಸ್ತುಗಳನ್ನು ತಯಾರಿಸಿ ಪರಿಸರಕ್ಕೆ ಮತ್ತು ಮಾನವ ಸಂಕುಲಕ್ಕೆ ಕೊಡುಗೆ ನೀಡುತ್ತಿದೆ. ಹತ್ತಾರು ಕೈಗಳಿಗೆ ಉದ್ಯೋಗ ಸಹ ಕೊಡುವ ಮೂಲಕ ಹಲವು ಕುಟುಂಬಗಳಿಗೆ ಆಧಾರಸ್ತಂಭವಾಗಿ ನಿಂತಿದೆ. ಈಗ ಪರಿಸರ ಸ್ನೇಹಿ ಹಣತೆ ನೀಡಲು ಮುಂದೆ ಬಂದಿದ್ದು ನಿಜಕ್ಕೂ ಉತ್ತಮ ಕಾರ್ಯ.