ಕಲಬುರಗಿ: ಕೋವಿಡ್ ಪ್ರಕರಣಗಳ ಇಳಿಕೆ ಹಿನ್ನೆಲೆ ಹಂತ ಹಂತವಾಗಿ ಶಾಲೆಗಳ ಪುನಾರಂಭಕ್ಕೆ ಸರ್ಕಾರ ಮುಂದಾಗಿದೆ. ಇಂದಿನಿಂದ 1-5 ತರಗತಿವರೆಗಿನ ಶಾಲೆಗಳ ಆರಂಭಕ್ಕೆ ಅನುಮತಿ ನೀಡಿದ್ದು, ಕಲಬುರಗಿ ಜಿಲ್ಲೆಯಲ್ಲಿ ಶಿಕ್ಷಕರು ಮಕ್ಕಳಿಗೆ ಅದ್ಧೂರಿ ಸ್ವಾಗತ ಕೋರಿದ್ದಾರೆ.
ಸರ್ಕಾರದ ಮಾರ್ಗಸೂಚಿಯಂತೆ ಕಲಬುರಗಿಯಲ್ಲಿ ಕಿರಿಯ ಪ್ರಾಥಮಿಕ ಶಾಲೆ ಆರಂಭಿಸಲಾಗಿದೆ. ಶಿಕ್ಷಕರು ಎರಡು ಡೋಸ್ ಕೋವಿಡ್ ಲಸಿಕೆ ಪಡೆದಿರಬೇಕು ಹಾಗೂ ಮಕ್ಕಳು ಶಾಲೆಗೆ ಬರಲು ಪೋಷಕರ ಒಪ್ಪಿಗೆ ಪತ್ರ ಕಡ್ಡಾಯಾಗಿದೆ. ಆರಂಭಿಕ ಒಂದು ವಾರ ಅರ್ಧ ದಿನ ಮಾತ್ರ ಮಕ್ಕಳಿಗೆ ಪಾಠವನ್ನು ಸರ್ಕಾರವೇ ಮಾರ್ಗ ಸೂಚಿ ಜಾರಿ ಮಾಡಿದೆ. ವಾರದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಐದು ದಿನ ಮಾತ್ರ ತರಗತಿ ನಡೆಯಲಿವೆ.
ಇನ್ನು ಕಲಬುರಗಿ ಜಿಲ್ಲೆಯಲ್ಲಿ ಒಟ್ಟು ಸರ್ಕಾರಿ, ಅನುದಾನಿತ, ಅನುದಾನ ರಹಿತ 1,029 ಶಾಲೆಗಳಿದ್ದು, 1-5 ತರಗತಿವರೆಗೆ 80,434 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕೋವಿಡ್ ನಿಯಮಗಳೊಂದಿಗೆ ಶಾಲೆ ತೆರೆಯಲು ಶಿಕ್ಷಣ ಇಲಾಖೆಯಿಂದ ಸಕಲ ವ್ಯವಸ್ಥೆ ಮಾಡಲಾಗಿದೆ.
ಕೊಠಡಿಗಳನ್ನು ಸ್ಯಾನಿಟೈಸ್ ಮಾಡಲಾಗಿದ್ದು, ಒಂದು ಕೊಠಡಿಯಲ್ಲಿ 15-20 ಮಕ್ಕಳ ಆಸನಕ್ಕೆ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಮಕ್ಕಳಿಗೆ ಪಾಠ ಮಾಡುವಂತೆ ಶಿಕ್ಷರಿಗೆ ಸೂಚನೆ ನೀಡಲಾಗಿದೆ.
ಬಲೂನಿಂದ ಶೃಂಗಾರಿಸಿ ಅದ್ಧೂರಿ ಸ್ವಾಗತ:
ಶಾಲೆ ಆರಂಭ ಹಿನ್ನೆಲೆ ನಗರದ ಎಸ್.ಆರ್ ಮೇಹ್ತಾ ಶಾಲೆಯಲ್ಲಿ ಚಿಣ್ಣರನ್ನ ಅದ್ಧೂರಿಯಾಗಿ ಸ್ವಾಗತಿಸಲಾಗಿದೆ. ಶಾಲೆಗೆ ಬಲೂನ್ಗಳನ್ನು ಕಟ್ಟಿ ಶಿಕ್ಷಕರು ಸ್ವಾಗತ ಕೋರಿದ್ದಾರೆ.