ಕಲಬುರಗಿ: ತಿಳಿದೋ ತಿಳಿಯದೆಯೋ ರೌಡಿ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದೀರಿ. ಆದರೆ, ಇನ್ನು ಮುಂದೆ ಸುಧಾರಣೆ ಮಾಡಿಕೊಳ್ಳದಿದ್ದರೆ ಗಡಿಪಾಡು ಮಾಡಬೇಕಾಗುತ್ತದೆ ಎಂದು ಸಿಪಿಐ ಮಹಾಂತೇಶ ಪಾಟೀಲ್ ರೌಡಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಜಿಲ್ಲೆಯ ಅಫ್ಜಲಪುರ ಪಟ್ಟಣದ ಪೊಲೀಸ್ ಮೈದಾನದಲ್ಲಿ ರೌಡಿ ಪರೇಡ್ ನಡೆಸಿದ ಸಿಪಿಐ ಮಹಾಂತೇಶ ಪಾಟೀಲ್ ಖಡಕ್ ವಾರ್ನಿಂಗ್ ನೀಡುವ ಮೂಲಕ ರೌಡಿಗಳ ಬೆವರಿಳಿಸಿದರು. ಊರಿನಲ್ಲಿ ನೆಮ್ಮದಿಯಾಗಿ ಬದುಕಬೇಕಾದರೆ ಶಾಶ್ವತವಾಗಿ ಅಪರಾಧ ಚಟುವಟಿಕೆಗಳಲ್ಲಿ ಕಾಣಿಸಿಕೊಳ್ಳಬೇಡಿ. ಒಂದು ವೇಳೆ ಮತ್ತೆ ಅಪರಾಧ ಕೃತ್ಯಗಳಲ್ಲಿ ಭಾಗವಹಿಸಿದ್ದು ಗೊತ್ತಾದರೆ ಗಡಿಪಾರು ಮಾಡ್ತೇವೆ ಎಂದು ವಾರ್ನ್ ಮಾಡಿದರು.
ಮಟಕಾ, ಜೂಜಾಟ, ಅಕ್ರಮ ಮರಳುಗಾರಿಕೆ ವ್ಯವಹಾರದಲ್ಲಿ ತೊಡಗಿದವರು ಅದರಿಂದ ದೂರವಾಗಬೇಕು. ಕೊಲೆ, ಸುಲಿಗೆ, ಹೊಡೆದಾಟದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಇಲ್ಲವಾದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ತಿಳಿಹೇಳಿದರು. ನೂರಕ್ಕೂ ಹೆಚ್ಚು ರೌಡಿಗಳು ಪರೇಡ್ನಲ್ಲಿ ಹಾಜರಿದ್ದರು. ಠಾಣಾ ಪಿಪಿಎಸ್ಐ ಮಂಜುನಾಥ ಹೂಗಾರ ಸೇರಿದಂತೆ ಮತ್ತಿತರ ಪೊಲೀಸ್ ಸಿಬ್ಬಂದಿ ಈ ವೇಳೆ ಉಪಸ್ಥಿತರಿದ್ದರು.