ಕಲಬುರಗಿ : ಜಿಲ್ಲೆಯಲ್ಲಿ ವರುಣನ ಆರ್ಭಟ ಜೋರಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಶಾಲಾ-ಕಾಲೇಜು ಅಂಗನವಾಡಿಗಳಿಗೆ ರಜೆ ನೀಡುವುದರೊಂದಿಗೆ ಮೂರು ದಿನ ಯೆಲ್ಲೋ ಅಲರ್ಟ್ ಮತ್ತು ಚಿಂಚೋಳಿ ತಾಲ್ಲೂಕಿನಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಪ್ರವಾಹದ ಆತಂಕವಿದ್ದು, ತುರ್ತು ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸಕಲ ತಯಾರಿ ಮಾಡಿಕೊಂಡು ಸನ್ನದ್ಧವಾಗಿದೆ. ಪ್ರವಾಹ ಪರಿಸ್ಥಿತಿ ನಿಭಾಯಿಸಲು ಜಿಲ್ಲಾಡಳಿತ 8 ರಕ್ಷಣಾ ತಂಡಗಳನ್ನು ಕಾರ್ಯಾಚರಣೆಗೆ ಸಜ್ಜುಗೊಳಿಸಿದೆ.
ಅಗ್ನಿಶಾಮಕ, ಎಸ್‌ಡಿಆರ್‌ಎಫ್, ಹೋಂ ಗಾರ್ಡ್ ಸೇರಿದಂತೆ ಎಂಟು ರಕ್ಷಣಾ ತಂಡಗಳನ್ನು ಸಿದ್ಧ ಮಾಡಿಕೊಂಡು ಪ್ರಯೋಗಿಕ ರೆಸ್ಕ್ಯೂ ಟ್ರಾಯಲ್ ಕೂಡ ನಡೆಸಲಾಗಿದೆ. ರಕ್ಷಣಾ ಕಾರ್ಯಕ್ಕೆ ಬೇಕಾಗುವ ಬೋಟ್, ಲೈಫ್ ಜಾಕೆಟ್, ರೋಪ್ ಸೇರಿದಂತೆ ಅಗತ್ಯ ಸಲಕರಣೆಗಳನ್ನು ಸಿದ್ಧಪಡಿಸಿಕೊಳ್ಳಲಾಗಿದೆ. ಅಲ್ಲದೆ ಪ್ರವಾಹ ಪರಿಸ್ಥಿತಿ, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಗ್ರಾಮ ಪಂಚಾಯತ್, ತಾಲ್ಲೂಕು, ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಸೂಚನೆ ನೀಡಲಾಗಿದೆ.
ಮನೆ ಕುಸಿದು ಮಹಿಳೆ ಸಾವು: ಎಡಬಿಡೆ ಸುರಿಯುತ್ತಿರುವ ಧಾರಾಕಾರ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಧಾರಾಕಾರ ಮಳೆಗೆ ಕಲಬುರಗಿಯಲ್ಲಿ ಮೊದಲ ಬಲಿಯಾಗಿದೆ. ಜಿಲ್ಲೆಯ ಚಿತ್ತಾಪುರ ಪಟ್ಟಣದ ಸ್ಟೇಷನ್ ಏರಿಯಾದಲ್ಲಿ ತಡರಾತ್ರಿ ಮನೆ ಕುಸಿದು ಬಿದ್ದು 60 ವರ್ಷದ ಆರೀಫಾ ಬೇಗಂ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಆರೀಫಾ ಬೇಗಂ ಪತಿ ಸರ್ದಾರ್ ಅಲಿ ಹಾಗು ಪುತ್ರಿ ಯಾಸ್ಮೀನ್ ಬೇಗಂ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲಾಡಳಿತ ಸೂಚನೆ: ಜೂನ್ ತಿಂಗಳಲ್ಲಿ ಮಳೆ ಆಗದಿದ್ದರು, ಜುಲೈ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುತ್ತಿದೆ. ಎರಡು ದಿನಗಳಿಂದ ವರುಣ ಬಿಸಿಲೂರಿನಲ್ಲಿ ಎಡಬಿಡದೆ ಆರ್ಭಟಿಸುತ್ತಿದ್ದು, ಜೀವ ಹಾನಿ ಸೇರಿದಂತೆ ಅವಾಂತರಗಳನ್ನು ಸೃಷ್ಟಿಸುತ್ತಿದ್ದಾನೆ. ಮುಂದಿನ ಎರಡು ದಿನಗಳ ಕಾಲ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ ಎಂದು ಜಿಲ್ಲಾಡಳಿತ ಮತ್ತು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆ ಆಯಾ ತಾಲೂಕಿನ ತಹಶೀಲ್ದಾರ್ ಹಾಗೂ ನೋಡಲ್ ಅಧಿಕಾರಿಗಳು ತಾಲೂಕು ಕೇಂದ್ರದಲ್ಲಿಯೇ ಠಿಕಾಣಿ ಹೂಡಿ ಕಾರ್ಯಪೃವತ್ತರಾಗಲು ಜಲ್ಲಾಡಳಿತ ಸೂಚನೆ ನೀಡಿದೆ.
ಇದನ್ನೂ ಓದಿ : ಕೆಆರ್ಎಸ್ ಜಲಾಶಯದಿಂದ ಕಾವೇರಿ ನದಿಗೆ 25 ಸಾವಿರ ಕ್ಯೂಸೆಕ್ ನೀರು ಬಿಡುಗಡೆ