ಕಲಬುರಗಿ: ಜಿಲ್ಲೆಯಾದ್ಯಂತ ನಾಲ್ಕನೇ ದಿನವೂ ಮಳೆರಾಯನ ಆರ್ಭಟ ಮುಂದುವರೆಸಿದ್ದು, ಅಪಾರ ಪ್ರಮಾಣದ ಬೆಳೆ ಆಸ್ತಿ-ಪಾಸ್ತಿ ಹಾನಿ ಸಂಭವಿಸಿದೆ. ಹಲವು ಬಡಾವಣೆ, ಗ್ರಾಮಗಳು ಜಲಾವೃತ್ತವಾಗಿವೆ.
ಕಳೆದ ನಾಲ್ಕೂ ದಿನಗಳಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ವರ್ಷಧಾರೆಯಿಂದ ಕಲಬುರಗಿ ಜನ ಅಕ್ಷರಶಃ ಬೇಸತ್ತು ಹೋಗಿದ್ದಾರೆ. ಮಳೆಯಿಂದ ಹಲವು ಹಳ್ಳಿಗಳು ಜಲಾವೃತ್ತವಾಗಿ ಮನೆಗಳು ಕುಸಿದು ಬಿದ್ದಿವೆ. ಪಟ್ಟಣ ಪ್ರದೇಶದಲ್ಲಿಯೂ ಸಹ ಬಡವಾಣೆ ಹಾಗೂ ಮನೆಗಳಿಗೆ ನೀರು ಹೊಕ್ಕು ಚರಂಡಿಗಳು ತುಂಬಿ, ರಸ್ತೆಗಳು ನೀರಿನಿಂದ ಮುಳುಗಿ ಹೋಗಿ ಜನಜೀವನ ಅಸ್ತವ್ಯಸ್ತವಾಗಿದೆ. ಇನ್ನೂ ಕೆಲವೆಡೆ ದೇವಸ್ಥಾನಗಳು ಮುಳುಗಡೆಯಾಗಿದೆ.
ಗ್ರಾಮ ಸ್ಥಳಾಂತರಕ್ಕೆ ಒತ್ತಾಯ
ಮಳೆಯಿಂದಾಗಿ ಕೆರೆಗಳು ಉಕ್ಕಿ ಹರಿಯುತ್ತಿದ್ದು, ಗ್ರಾಮಗಳಿಗೆ ಜಲಕಂಟಕ ಎದುರಾಗಿದೆ. ಸೈಯದ್ ಚಿಂಚೋಳಿ ಹಾಗೂ ಕೆರೆಭೋಸಗಾ ಗ್ರಾಮಗಳಿಗೆ ಕೆರೆ ನೀರು ಹೊಕ್ಕಿದ್ದು, ಜನ ಪರದಾಡುತ್ತಿದ್ದಾರೆ. ಇದರಿಂದ ಗ್ರಾಮ ಸ್ಥಳಾಂತರಕ್ಕೆ ಆಗ್ರಹಿಸಿದ್ದಾರೆ.
ಜಮೀನುಗಳಿಗೆ ನುಗ್ಗಿದ ನೀರು
ಜಮೀನುಗಳಲ್ಲಿ ನೀರು ನಿಂತು ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಬೆಳೆ ನಷ್ಟದಿಂದ ಕಂಗಾಲಾಗಿರುವ ರೈತರು ಪರಿಹಾರ ಒದಗಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ರಸ್ತೆ ಸಂಪರ್ಕ ಕಡಿತ
ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಅನೇಕ ಗ್ರಾಮಗಳ ಮತ್ತು ಪಟ್ಟಣಗಳ ಸಂಪರ್ಕ ಕಡಿತಗೊಂಡಿವೆ. ನದಿಗಳು ಸಹ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಸೇತುವೆಗಳ ಮೇಲೆ ನೀರು ಹರಿದು ರಸ್ತೆ ಸಂಪರ್ಕ ಕಡಿತಗೊಂಡಿವೆ.