ಕಲಬುರಗಿ : ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಪತಿ ರಾಜೇಶ್ ಹಾಗರಗಿಯನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಇದರೊಂದಿಗೆ ಬಂಧಿತರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಈಗಾಗಲೇ ಬಂಧನಕ್ಕೊಳಗಾಗಿ ನ್ಯಾಯಾಂಗದ ವಶದಲ್ಲಿರುವ 7 ಜನ ಆರೋಪಿಗಳನ್ನು ನ್ಯಾಯಾಲಯ ಇಂದಿನಿಂದ ಮೂರು ದಿನಗಳ ಕಾಲ ವಿಚಾರಣೆಗಾಗಿ ಸಿಐಡಿ ವಶಕ್ಕೆ ಒಪ್ಪಿಸಿದೆ. 545 ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ವಿಚಾರದ ಬಗ್ಗೆ ತನಿಖೆ ಚುರುಕುಗೊಳಿಸಿರುವ ಸಿಐಡಿ ಪೊಲೀಸರು, ಕಳೆದ ಒಂದು ವಾರದಿಂದ ಕಲಬುರಗಿಯಲ್ಲೇ ಬೀಡು ಬಿಟ್ಟಿದ್ದಾರೆ. ಸದ್ಯ ರಾಜೇಶನನ್ನು ಬಂಧಿಸಿರುವ ಸಿಐಡಿ ಅವರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಇದನ್ನೂ ಓದಿ: ಪಿಎಸ್ಐ ನೇಮಕಾತಿ ಅಕ್ರಮ ಆರೋಪ: ರ್‍ಯಾಂಕ್ ಪಡೆದಿದ್ದ ಕಲಬುರಗಿಯ ಅಭ್ಯರ್ಥಿ ಸಿಐಡಿ ವಶಕ್ಕೆ
ದಿವ್ಯಾ ಹಾಗರಗಿ ಎಸ್ಕೇಪ್ : ಪಿಎಸ್ಐ ಅಕ್ರಮಕ್ಕೆ ಕಾರಣವಾದ ಕಲಬುರಗಿಯ ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷೆ, ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಮನೆ ಮೇಲೆ ನಿನ್ನೆ (ಭಾನುವಾರ) ಸಿಐಡಿ ಪೊಲೀಸರು ದಾಳಿ ನಡೆಸಿ ಶೋಧ ನಡೆಸಿದ್ದರು. ಆ ವೇಳೆ ದಿವ್ಯಾ ಹಾಗರಗಿ ಮನೆಯಲ್ಲಿ ಇರಲಿಲ್ಲ. ಕಳೆದ ನಾಲ್ಕು ದಿನಗಳಿಂದ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ದಿವ್ಯಾ ನಾಪತ್ತೆಯಾಗಿದ್ದಾರೆ. ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ದಿವ್ಯಾ ಹಾಗರಗಿ ಮನೆಯಲ್ಲಿ ಮಹತ್ವದ ದಾಖಲೆ ಕೂಡ ಸಿಐಡಿ ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ನ್ಯಾಯಾಂಗ ವಶದಲ್ಲಿರುವ ಆರೋಪಿಗಳನ್ನು ವಿಚಾರಣೆಗೆ ತಮ್ಮ ವಶಕ್ಕೆ ನೀಡುವಂತೆ ಸಿಐಡಿ ಕೋರಿಕೆಯನ್ನು ಮಾನ್ಯ ಮಾಡಿರುವ ಕಲಬುರಗಿ ಜಿಲ್ಲಾ ನ್ಯಾಯಾಲಯ ಮೂರು ದಿನ ಸಿಐಡಿ ಕಸ್ಟಡಿಗೆ ನೀಡಿದೆ. ಇಂದಿನಿಂದ ಮೂರು ದಿನಗಳ ಕಾಲ ಕಸ್ಟಡಿಗೆ ಪಡೆಯಲಿರುವ ಸಿಐಡಿ, ದಿವ್ಯಾ ಹಾಗರಗಿಗೆ ಸೇರಿದ ಜಿಡಿಎ ಕಾಲೋನಿಯ ಜ್ಞಾನ ಜ್ಯೋತಿ ಪರೀಕ್ಷಾ ಕೇಂದ್ರಕ್ಕೆ ಆರೋಪಿಗಳನ್ನು ಕರೆದೊಯ್ದು, ಹೇಗೆಲ್ಲಾ ಅಕ್ರಮ ಮಾಡಿದ್ದಾರೆ, ಯಾರೆಲ್ಲಾ ಸಹಕಾರ ನೀಡಿದ್ದಾರೆ ಎಂಬ ಬಗ್ಗೆ ಮಾಹಿತಿ ಕಲೆ ಹಾಕಲಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಪ್ರಕರಣದ ತನಿಖೆ ಮುಗಿದ ಬಳಿಕವಷ್ಟೇ 402 ಪಿಎಸ್ಐ ನೇಮಕಾತಿಗೆ ಪರೀಕ್ಷೆ: ಪ್ರವೀಣ್ ಸೂದ್