ಕಲಬುರಗಿ: ಕರ್ನಾಟಕ ರಾಜ್ಯ ಬೀಜ ನಿಗಮವನ್ನು ಮಹಾರಾಷ್ಟ್ರ ರಾಜ್ಯದ ಬೀಜ ನಿಗಮ ಮಾದರಿಯಲ್ಲಿ ಪರಿವರ್ತಿಸಬೇಕು ಎಂದು ಒತ್ತಾಯಿಸಿ ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಕಲ್ಯಾಣ ಕರ್ನಾಟಕ ಪ್ರಾಮಾಣಿತ ಬೀಜೋತ್ಪಾದಕರ ಸಂಘ ಧರಣಿ ಸತ್ಯಾಗ್ರಹ ನಡೆಸುತ್ತಿದೆ.
ಕೃಷಿ ಉತ್ಪಾದನೆಯಲ್ಲಿ ಹೆಚ್ಚಿನ ಇಳುವರಿ ಪಡೆಯಲು ಉತ್ತಮ ಗುಣಮಟ್ಟದ ಶುದ್ಧವಾದ ಬೀಜಗಳ ಅಗತ್ಯವಿದೆ. ಈ ಭಾಗದಲ್ಲಿ ತೊಗರಿ ಮತ್ತು ಕಡಲೆ ಪ್ರಮುಖ ಬೆಳೆಗಳಾಗಿದ್ದು, ಪ್ರತಿವರ್ಷ ಸುಧಾರಿತ ತಳಿಗಳನ್ನು ಬೀಜೋತ್ಪಾದನೆಗೆ ಉಪಯೋಗಿಸಲಾಗುತ್ತಿದೆ. ಬೀಜೋತ್ಪಾದನೆಗೆ ಹೆಚ್ಚಿನ ಒತ್ತು ನೀಡಲು 2018-19 ನೇ ಸಾಲಿನಲ್ಲಿ ಕೇಂದ್ರ ಸರ್ಕಾರ ಪ್ರೋತ್ಸಾಹಧನವನ್ನು ಅರ್ಹ ಬೀಜೋತ್ಪಾದಕರಿಗೆ ವಿತರಿಸಲು ರಾಜ್ಯ ಸರಕಾರಕ್ಕೆ ನೀಡಿದೆ. ಆದರೆ, ರಾಜ್ಯ ಸರ್ಕಾರ ಅನುದಾನವನ್ನು ಬೇರೆ ಘಟಕಕ್ಕೆ ಉಪಯೋಗಿಸಿ ಬೀಜೋತ್ಪಾದನೆಗೆ ಅನ್ಯಾಯ ಎಸೆಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ತಕ್ಷಣ ಕೇಂದ್ರ ಸರ್ಕಾರದ ಅನುದಾನವನ್ನು ಬೀಜೋತ್ಪಾದನೆಗೆ ನೀಡುವಂತೆ ಕೃಷಿ ಇಲಾಖೆ ಸೂಕ್ತ ನಿರ್ದೇಶನ ನೀಡಬೇಕು ಹಾಗೂ ಮಹಾರಾಷ್ಟ್ರ ಮಾದರಿಯಲ್ಲಿ ಬೀಜೋತ್ಪಾದನೆಗೆ ಅಗತ್ಯ ಸೌಕರ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಮನವಿ ಪತ್ರ ನೀಡಿದರು.