ಕಲಬುರಗಿ: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಪ್ರತಿ ರೈತರಿಂದ 20 ಕ್ವಿಂಟಾಲ್ ತೊಗರಿ ಖರೀದಿ ಮಾಡುವುದಾಗಿ ವಾಗ್ದಾನ ಮಾಡಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾತು ತಪ್ಪಿದ್ದಾರೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ಈ ಕುರಿತು ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಸರ್ಕಾರದ ಈ ಹಿಂದಿನ ಆದೇಶದಂತೆ ಜಿಲ್ಲೆಯ 1.21 ಲಕ್ಷ ರೈತರು, 10.02 ಲಕ್ಷ ಕ್ವಿಂಟಾಲ್ ತೊಗರಿ ಮಾರಾಟ ಮಾಡಿದ್ದಾರೆ. ಆದರೆ, ಅವರಿಗೆ ಬರಬೇಕಾಗಿರುವ ಹಣದಲ್ಲಿ 399 ಕೋಟಿ ರೂ ಬಾಕಿ ಉಳಿಸಿಕೊಂಡು ಕೇವಲ 212 ಕೋಟಿ ಮಾತ್ರ ಬಿಡುಗಡೆ ಮಾಡಿದೆ.
ಬಾಕಿ ಹಣಕ್ಕಾಗಿ ರೈತರು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಲಾಕ್ಡೌನ್ನಿಂದಾಗಿ ಸಣ್ಣ ರೈತರು ದುಡಿಮೆಯಿಲ್ಲದೇ ಕಂಗಾಲಾಗಿದ್ದಾರೆ. ಈ ಹೊತ್ತಿನಲ್ಲಿ ಸರಕಾರ ಅವರ ಹಣ ಬಾಕಿ ಉಳಿಸಿಕೊಂಡಿದೆ. ಇಷ್ಟಾದರೂ, ಬಿಜೆಪಿ ಶಾಸಕರು ರೈತರ ಪರ ದನಿ ಎತ್ತದೇ ಅವರಿಗೆ ನ್ಯಾಯ ಒದಗಿಸಿಕೊಡುವ ಪ್ರಯತ್ನ ಮಾಡಿಲ್ಲ. ಕೂಡಲೇ ರೈತರ ಬಾಕಿ ಹಣ ಬಿಡುಗಡೆ ಮಾಡುವಂತೆ ಪ್ರಿಯಾಂಕ್ ಖರ್ಗೆ ಅವರು ಬರೆದುಕೊಂಡಿದ್ದಾರೆ.