ಕಲಬುರಗಿ: ಚಿಂಚೋಳಿ ಮೀಸಲು ಮತಕ್ಷೇತ್ರದ ಉಪ ಚುನಾವಣೆಗೆ ನಾಳೆ ಮತದಾನ ಪ್ರಕ್ರಿಯೆ ನಡೆಯಲಿದ್ದು, ಚುನಾವಣಾಧಿಕಾರಿಗಳು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.
ಕ್ಷೇತ್ರದಲ್ಲಿ 98,994 ಪುರುಷ, 94,772 ಮಹಿಳಾ ಹಾಗೂ 16 ಇತರೆ ಮತದಾರು ಸೇರಿ ಒಟ್ಟು 1,93,782 ಮತದಾರರು ನಾಳೆ ತಮ್ಮ ಹಕ್ಕು ಚಲಾಯಿಸಲಿದ್ದಾರೆ.
ಮತದಾನಕ್ಕಾಗಿ ಒಟ್ಟು 241 ಮತಗಟ್ಟೆಗಳ ಸ್ಥಾಪನೆ ಮಾಡಲಾಗಿದ್ದು, ಇದರಲ್ಲಿ 60 ಸೂಕ್ಷ್ಮ ಮತಗಟ್ಟೆಗಳು ಎಂದು ಗುರುತಿಸಲಾಗಿದೆ. ನಿಯೋಜನೆಗೊಂಡ ಅಧಿಕಾರಿಗಳು ಹಾಗೂ ಸಿಬ್ಬಂದಿ ಮತದಾನಕ್ಕೆ ಇವಿಎಂ ಮಷಿನ್ ಹಾಗೂ ಅಗತ್ಯ ಸಾಮಗ್ರಿಗಳನ್ನು ತೆಗೆದುಕೊಂಡು ಮತಗಟ್ಟೆಗಳತ್ತ ತೆರಳಿದ್ದಾರೆ.
ಕ್ಷೇತ್ರದಲ್ಲಿ ಬಿಗಿ ಭದ್ರತೆ...
ಇನ್ನು ಚುನಾವಣೆ ಹಿನ್ನೆಲೆಯಲ್ಲಿ ಚಿಂಚೋಳಿ ಕ್ಷೇತ್ರದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಕಲಬುರಗಿ ಎಸ್ಪಿ, ಅಪರ ಎಸ್ಪಿ, ಮೂವರು ಡಿಎಸ್ಪಿ, 12 ಜನ ಸಿಪಿಐ, 18 ಪಿಎಸ್ಐ, ಸೇರಿ 600 ಜನ ಪೊಲೀಸ್ ಸಿಬ್ಬಂದಿ, 300 ಹೋಮ್ ಗಾರ್ಡ್ಸ್, 3 ಕೆಎಸ್ಆರ್ಪಿ, 12 ಡಿಆರ್ ತುಕಡಿ ಹಾಗೂ 4 ಕೇಂದ್ರ ಅರೆಸೇನಾ ತುಕಡಿಗಳನ್ನು ಭದ್ರತೆ ಕಾರ್ಯಕ್ಕೆ ನಿಯೋಜನೆ ಮಾಡಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.
ಒಟ್ಟಾರೆ ಶಾಂತಿಯುತ ಮತದಾನಕ್ಕೆ ಚುನಾವಣಾಧಿಕಾರಿಗಳು ಸರ್ವ ಸಿದ್ಧತೆ ಮಾಡಿಕೊಂಡಿದ್ದು, ಕಣದಲ್ಲಿರುವ ಒಟ್ಟು 17 ಅಭ್ಯರ್ಥಿಗಳ ಹಣೆಬರಹ ನಾಳೆ ಮತಯಂತ್ರಗಳಲ್ಲಿ ಭದ್ರವಾಗಲಿದೆ.