ಕಲಬುರಗಿ: ಜಿಲ್ಲೆಯಲ್ಲಿ ಜುಲೈ 27ರವರೆಗೆ ಲಾಕ್ಡೌನ್ ವಿಸ್ತರಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಆದರೆ ಸರ್ಕಾರದ ಆದೇಶಕ್ಕೆ ಸೊಪ್ಪು ಹಾಕದ ಕೆಲವರು ಬೇಕಾಬಿಟ್ಟಿಯಾಗಿ ರಸ್ತೆಯಲ್ಲಿ ಸಂಚರಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಸೋಂಕಿನ ಪ್ರಕರಣಗಳು ಹೆಚ್ಚುತ್ತಿದ್ದು, ಸಾವಿನ ಸಂಖ್ಯೆಯೂ ಏರತೊಡಗಿದೆ. ಸೋಂಕು ನಿವಾರಣೆಗೆ ಜಿಲ್ಲಾಡಳಿತ ಲಾಕ್ಡೌನ್ ಜಾರಿಗೊಳಿಸಿದೆ. ಅದರೂ ಸಹ ಜನ ಯಾರಿಗೆ ಏನಾದ್ರೆ ನಮ್ಗೇನು ಎಂಬಂತೆ ಮೊಂಡುತನ ಪ್ರದರ್ಶಿಸುತ್ತಿದ್ದಾರೆ. ಕುಂಟು ನೆಪ ಹೇಳಿ ಹೊರಗಡೆ ವಿನಾಕಾರಣ ಓಡಾಡುತ್ತಿದ್ದವರಿಗೆ ಪೊಲೀಸರು ಲಾಠಿ ಏಟು ನೀಡುತ್ತಿದ್ದಾರೆ.
ಜನಸಂದಣಿ ನಿವಾರಣೆಗೆ ಪೊಲೀಸರು ಹರಸಾಹಸ ಪಡುತ್ತಿದ್ದು, ಮೆಡಿಕಲ್, ಆಸ್ಪತ್ರೆ ಸಿಬ್ಬಂದಿಯೆಂದು ಸುಳ್ಳು ಹೇಳಿ ರಸ್ತೆ ಮೇಲೆ ಓಡಾಡುತ್ತಿರುವವರಿಗೆ ಲಾಠಿ ರುಚಿ ತೋರಿಸುತ್ತಿದ್ದಾರೆ. ಇಷ್ಟಾದರೂ ಜನ ಮಾತ್ರ ಅನಗತ್ಯವಾಗಿ ತಿರುಗಾಡುವುದನ್ನು ಮಾತ್ರ ನಿಲ್ಲಿಸದಿರುವುದು ವಿಪರ್ಯಾಸವೇ ಸರಿ.