ಕಲಬುರಗಿ : ರಾಜ್ಯದಲ್ಲಿ ಕೊರೊನಾ 3 ನೇ ಅಲೆ ಶುರುವಾಗಿದೆ. ಅದರ ಭೀಕರತೆ ತಡೆಗೆ ಸರ್ಕಾರ ಮುನ್ನೆಚ್ಚರಿಕಾ ಕ್ರಮವಾಗಿ ವೀಕೆಂಡ್, ನೈಟ್ ಕರ್ಫ್ಯೂ ಜಾರಿ ಮಾಡಿ ಆದೇಶಿಸಿದೆ. ಆದರೆ, ಶನಿವಾರ-ಭಾನುವಾರ ಕೆಲವೆಡೆಗಳಲ್ಲಿ ಸಂತೆ ನಡೆಯುವ ಕಾರಣ ಕರ್ಫ್ಯೂಗೆ ಭಾರೀ ವಿರೋಧ ವ್ಯಕ್ತವಾಗಿದೆ.
ಈ ಮಧ್ಯೆ ಕಲಬುರಗಿಯ ಫಿಲ್ಟರ್ ಬೆಡ್ ಪ್ರದೇಶದಲ್ಲಿ ಶನಿವಾರ ನಡೆಯುವ ಸಂತೆಯಲ್ಲಿ ಕುರಿ ಮಾರಾಟ, ಖರೀದಿಗೆ ಬಂದವರು ಮಾಸ್ಕ್, ಸಾಮಾಜಿಕ ಅಂತರವನ್ನು ಪಾಲಿಸದೇ ಎಲ್ಲ ಕೊರೊನಾ ನಿರ್ಬಂಧಗಳನ್ನು ಉಲ್ಲಂಘಿಸಿದ್ದಾರೆ.
ಇದಲ್ಲದೇ, ಸರ್ಕಾರದ ನಿರ್ಬಂಧಗಳ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿರುವ ಜನರು, ಮೂರು ತಿಂಗಳಿಗೊಮ್ಮೆ ಲಾಕ್ಡೌನ್, ಕರ್ಫ್ಯೂ ಹಾಕುತ್ತಿದ್ದರೆ, ನಾವೆಲ್ಲಾ ಬದುಕಬೇಕಾ? ಸಾಯಬೇಕಾ? ಎಂದು ಪ್ರಶ್ನಿಸಿದ್ದಾರೆ.
ಅತಿವೃಷ್ಟಿ, ಅನಾವೃಷ್ಟಿಯಿಂದ ಈ ವರ್ಷ ಬೆಳೆಯಿಲ್ಲದೇ ಜನರು ಸಾಯುತ್ತಿದ್ದಾರೆ. ಸರ್ಕಾರ ಕೊರೊನಾ ಹೆಸರಲ್ಲಿ ಲಾಕ್ಡೌನ್ ಹೇರುತ್ತಿದ್ದರೆ ಬದುಕುವುದು ಹೇಗೆ?. ಇದರ ಬದಲು ನಮ್ಮೆಲ್ಲರನ್ನೂ ಒಂದೇ ಸಲ ಸಾಯಿಸಿಬಿಡಿ ಎಂದು ಸರ್ಕಾರದ ವಿರುದ್ಧ ಕೆಂಡಕಾರಿದ್ದಾರೆ.
ಬದುಕು ಸಾಗಲು ಮನೆಯಲ್ಲಿರುವ ಕುರಿಗಳನ್ನು ಮಾರಾಟ ಮಾಡುತ್ತಿದ್ದೇವೆ. ಹೆಂಡತಿ, ಮಕ್ಕಳಿಗೆ ತುತ್ತು ಅನ್ನ ಹಾಕೋದು ಹೇಗೆ?. ಶನಿವಾರ ಮತ್ತು ಭಾನುವಾರ ಮಾತ್ರ ಕೊರೊನಾ ಇರುತ್ತಾ? ನೀವು ಹೇಳುವ ಕೊರೊನಾ ಎಲ್ಲಿದೆ ಎಂದು ವ್ಯಾಪಾರಸ್ಥರೊಬ್ಬರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಕೊರೊನಾ ಲಸಿಕೆ ಪಡೆದ 15-18 ವರ್ಷದೊಳಗಿನ 2 ಕೋಟಿಗೂ ಅಧಿಕ ಮಕ್ಕಳು