ಕಲಬುರಗಿ: ಜಿಲ್ಲೆಯ ಗುಲ್ಬರ್ಗ ವಿಶ್ವವಿದ್ಯಾಲಯದ ಕಾರ್ಯವೈಖರಿಯ ವಿರುದ್ಧ ಆರೋಪ ಕೇಳಿಬಂದಿದ್ದು, ನಕಲಿ ಅಂಕಪಟ್ಟಿ ನೀಡಿದ ವ್ಯಕ್ತಿಯನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಉದ್ಯೋಗಾಕಾಂಕ್ಷಿ ಅಭ್ಯರ್ಥಿಯೊಬ್ಬರು ಆರೋಪ ಮಾಡಿದ್ದಾರೆ.
ಕಳೆದ 2019ರಲ್ಲಿ ಜಿಲ್ಲಾ ಆರೋಗ್ಯ ಕೇಂದ್ರದಲ್ಲಿ ಎನ್ಟಿಸಿಪಿ ಕಾರ್ಯಕ್ರಮದಡಿ ಖಾಲಿ ಇರುವ ಹುದ್ದೆಗೆ ಅರ್ಜಿಗೆ ಆಹ್ವಾನಿಸಲಾಗಿತ್ತು. ಈ ಹುದ್ದೆಗೆ ಒಟ್ಟು 10 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಈ ಪೈಕಿ ಮೂವರನ್ನು ಸೆಲೆಕ್ಷನ್ ಲಿಸ್ಟ್ನಲ್ಲಿ ಹಾಕಲಾಗಿತ್ತು. ಈ ಪೈಕಿ ಪ್ರಹ್ಲಾದ್ ಎಂಬ ಅಭ್ಯರ್ಥಿ ಮೊದಲನೆಯವನಾಗಿದ್ದ. ಆದರೆ ಆತನ ಅಂಕಪಟ್ಟಿ ನಕಲಿಯಾಗಿದ್ದರೂ ಸಹ ಆತನನ್ನು ಆಯ್ಕೆ ಮಾಡಲಾಗಿದೆ ಎಂದು ಬಳ್ಳಾರಿ ಮೂಲದ ಅಭ್ಯರ್ಥಿ ಎನ್. ರಾಘವೇಂದ್ರ ದೂರಿದ್ದಾರೆ.
ಮೊದಲು ಪ್ರಹ್ಲಾದ್ ಹೆಸರು ಪಟ್ಟಿಯಲ್ಲಿತ್ತು, ನಂತರ ನನ್ನ ಹೆಸರಿತ್ತು. ಇಬ್ಬರ ದಾಖಲೆಗಳನ್ನು ಗುಲಬರ್ಗಾ ವಿವಿ, ಕಲಬುರಗಿಗೆ ಪರಿಶೀಲನೆಗೆಂದು ಕಳುಹಿಸಿತ್ತು. ಪರಿಶೀಲನೆ ಆದ ನಂತರ ನೇಮಕಾತಿ ಮಾಡುತ್ತೇವೆ ಎಂದಿದ್ದರು. ಆದರೆ, ಈ ವೇಳೆ ನಕಲಿ ದಾಖಲೆ ಇದ್ದರೂ ಕೂಡ ಪ್ರಹ್ಲಾದ್ನನ್ನು ಆಯ್ಕೆ ಮಾಡಲಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸಿದ ಡಿಎಚ್ಓ ಕೂಡ ನಕಲಿ ದಾಖಲಾತಿಗಳು ಎಂದು ವರದಿ ನೀಡಿದ್ದಾರೆ. ಆದರೂ ಆ ವ್ಯಕ್ತಿಗೆ ನೇಮಕಾತಿ ಆದೇಶ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಮೌಲ್ಯಮಾಪನ ವಿಭಾಗದ ಕುಲಸಚಿವರು ಹೇಳೋದೇನು?
ನಕಲಿ ಅಂಕಪಟ್ಟಿ ಆರೋಪದ ಬಗ್ಗೆ ಗುಲಬರ್ಗಾ ವಿಶ್ವವಿದ್ಯಾಲಯದ ಮೌಲ್ಯಮಾಪನ ವಿಭಾಗದ ಕುಲಸಚಿವ ಸೋನಾರ್ ನಂದೂರ್ ಪ್ರತಿಕ್ರಿಯಿಸಿ, ನಾನು ಈಗ ತಾನೇ ಅಧಿಕಾರಕ್ಕೆ ಬಂದಿರುವೆ. ಇದರ ಬಗ್ಗೆ ನನಗೆ ಸರಿಯಾದ ಮಾಹಿತಿ ಇಲ್ಲ. ವರದಿ ತರಿಸಿಕೊಂಡು ಕಮಿಟಿ ರಚಿಸಿ ಪರಿಶೀಲನೆ ಮಾಡುತ್ತೇವೆ. ವರದಿ ಬಂದ ನಂತರ ಇದರಲ್ಲಿ ಯಾರೇ ತಪ್ಪು ಮಾಡಿದ್ರೂ ಅಂತವರ ವಿರುದ್ಧ ಸೂಕ್ತಕ್ರಮ ಕೈಗೊಳ್ಳುತ್ತೇನೆ. ಯಾವುದೇ ವಿದ್ಯಾರ್ಥಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದಿದ್ದಾರೆ.