ಕಲಬುರಗಿ: ನಿಗಧಿತ 14 ದಿನದ ಕ್ವಾರಂಟೈನ್ ವಾಸದ ಅವಧಿ ಮುಗಿದರೂ ನಮ್ಮನ್ನು ಮನೆಗೆ ಕಳುಹಿಸದೆ ಅಧಿಕಾರಿಗಳು ಇಬ್ಬಗೆ ನೀತಿ ಅನುಸರಿಸುತ್ತಿದ್ದಾರೆ ಎಂದು ಕ್ವಾರಂಟೈನ್ನಲ್ಲಿರುವ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರ ಸೇರಿ ಹೊರ ರಾಜ್ಯಗಳಿಂದ ಮರಳಿದ ಸುಮಾರು 32 ಸಾವಿರ ಜನರನ್ನು ಜಿಲ್ಲೆಯ 650 ಕ್ವಾರಂಟೈನ್ ಕೇಂದ್ರಗಳಲ್ಲಿ ಇಡಲಾಗಿದೆ.
ಕಿಟ್ ಕೊರತೆಯಿಂದ ಕೋವಿಡ್-19 ಪರೀಕ್ಷೆ ಮಾಡಲು ಆಗುತ್ತಿಲ್ಲ. ಕಿಟ್ ಬಂದ ತಕ್ಷಣ ಪರೀಕ್ಷಿಸಿ ಮನೆಗೆ ಕಳುಹಿಸುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಕ್ವಾರಂಟೈನ್ ಕೇಂದ್ರದಲ್ಲಿ ಸರಿಯಾದ ವ್ಯವಸ್ಥೆ ಇಲ್ಲ. ಮಳೆ ಬರುವ ಸಾಧ್ಯತೆಯಿದ್ದು, ಕೃಷಿ ಚಟುವಟಿಕೆಗಳಿಗೆ ಸಿದ್ಧತೆ ಮಾಡಿಕೊಳ್ಳಬೇಕು. ಸರ್ಕಾರದ ನಿರ್ದೇಶನದಂತೆ 14 ದಿನ ಕ್ವಾರಂಟೈನ್ ವಾಸ ಮುಗಿಸಿದ್ದೇವೆ. ತಕ್ಷಣ ಅಗತ್ಯ ತಪಾಸಣೆ ಮಾಡಿ. ಇಲ್ಲವೆ ಹಾಗೆ ನಮ್ಮನ್ನು ಮನೆಗೆ ಕಳುಹಿಸಿ ಎಂದು ಜನ ಪಟ್ಟು ಹಿಡಿದು ಕುಳಿತ್ತಿದ್ದಾರೆ.
ಕ್ವಾರಂಟೈನ್ ಕೇಂದ್ರದಲ್ಲಿ ಸ್ನಾನದ ಗೃಹ, ಶೌಚಾಲಯ ಒಂದೇ ಇದೆ. ಟೆಸ್ಟಿಂಗ್ ಕಿಟ್ ಕೊರತೆಯಿಂದ ಅಧಿಕಾರಿಗಳು ಸಹ ಅಸಹಾಯಕರಾಗಿದ್ದಾರೆ. ಜಿಲ್ಲಾಧಿಕಾರಿಗಳು ಕಿಟ್ ಕೊರತೆ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ರಾಜ್ಯ ಹಾಗೂ ಕೇಂದ್ರ ಸರ್ಕಾರ ತಕ್ಷಣ ಸ್ಪಂದಿಸಬೇಕು ಎಂದು ಸಿಪಿಐಎಂ ಮುಖಂಡ ಶರಣಬಸಪ್ಪ ಮಮಶೆಟ್ಟಿ ಆಗ್ರಹಿಸಿದ್ದಾರೆ. ಜನಪ್ರತಿನಿಧಿಗಳು ಕೇವಲ ಪ್ರಚಾರ ಪಡೆಯುವ ಕೆಲಸ ಬಿಟ್ಟು ಜನರ ಸಮಸ್ಯೆ ಬಗೆಹರಿಸುವ ಕೆಲಸ ಮಾಡಲಿ ಎಂದು ಅವರು ಒತ್ತಾಯಿಸಿದ್ದಾರೆ.