ಕಲಬುರಗಿ : ಹೆಣ್ಣು ಕೊಟ್ಟ ಅತ್ತೆಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆಗೈದ ಅಳಿಯನಿಗೆ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಶಿಕ್ಷೆಗೊಳಗಾದ ವ್ಯಕ್ತಿಯನ್ನು ರಾಮು ಹುಡಗಿ ಎಂದು ಗುರುತಿಸಲಾಗಿದೆ. ಕಳೆದ 2020ರ ನವೆಂಬರ್ 4 ರಂದು ಕಲಬುರಗಿ ತಾಲೂಕಿನ ಭೀಮನಾಳ ಗ್ರಾಮದಲ್ಲಿ ಅತ್ತೆಯನ್ನು ಕೊಲೆಗೈದು ರಾಮು ಹುಡಗಿ ಪರಾರಿಯಾಗಿದ್ದ. ಬಳಿಕ ಪೊಲೀಸರು ಬಂಧಿಸಿದ್ದರು.
ಶಿಕ್ಷೆಗೊಳಗಾದ ರಾಮು ಹುಡಗಿ ಮದುವೆಯಾದಾಗಿನಿಂದ ತನ್ನ ಪತ್ನಿಯ ನಡತೆ ಮೇಲೆ ಸಂಶಯ ಪಡುತ್ತಿದ್ದ. ಹೆಂಡತಿಯು ಯಾರೊಂದಿಗೂ ಮಾತನಾಡಿದರೂ ಸಂಶಯ ಪಟ್ಟು ಗಲಾಟೆ ಮಾಡುತ್ತಿದ್ದ. ಗಂಡನ ವರ್ತನೆಯಿಂದ ಬೇಸತ್ತ ಪತ್ನಿ ಹಾಗು ಆಕೆಯ ತಾಯಿ ಭೀಮನಾಳ ಗ್ರಾಮದಲ್ಲಿ ಪಂಚಾಯಿತಿ ಸೇರಿಸಿದ್ದರು. ಈ ವೇಳೆ ತಾನು ಮಾಡಿದ್ದು ತಪ್ಪಾಗಿದೆ ಮಡದಿಯನ್ನು ತನ್ನ ಜೊತೆಗೆ ಕಳಿಸುವಂತೆ ರಾಮು ಕೇಳಿಕೊಂಡಿದ್ದ. ಆದರೆ ಇದಕ್ಕೆ ಒಪ್ಪದ ಪತ್ನಿ ತಾನು ಗಂಡನ ಜೊತೆ ಹೋಗಲ್ಲ, ಇಂತಹ ಹಲವು ಸಂಧಾನಗಳು ವಿಫಲವಾಗಿವೆ. ಇಲ್ಲಿಂದ ಕರೆದೊಯ್ದು ಮತ್ತೆ ಗಲಾಟೆ ಮಾಡುತ್ತಾನೆ ಎಂದು ಹೇಳಿದ್ದಳು.
ಇದರಿಂದ ಕೋಪಗೊಂಡ ರಾಮು ಪತ್ನಿ ಹಾಗೂ ಆಕೆಯ ತಾಯಿಯ ಜೊತೆ ಮತ್ತೆ ಜಗಳ ತೆಗೆದು ಹಲ್ಲೆ ಮಾಡಿದ್ದಾನೆ. ಈ ಬಗ್ಗೆ ಅತ್ತೆ ಮತ್ತು ಹೆಂಡತಿ ಪೊಲೀಸ್ ಠಾಣೆಗೆ ದೂರು ನೀಡಲು ತೆರಳುವ ಮಾರ್ಗ ಮಧ್ಯೆ ತಡೆದು ಅತ್ತೆ ಲುಗುಜಾಬಾಯಿ ತಲೆಯ ಮೇಲೆ ಕಲ್ಲುಎತ್ತಿ ಹಾಕಿ ಪರಾರಿಯಾಗಿದ್ದ. ಇದರಿಂದ ತೀವ್ರತ ಗಾಯಗೊಂಡ ಅತ್ತೆ ಲುಗುಜಾಬಾಯಿ ಸ್ಥಳದಲ್ಲಿಯೇ ಮೃತಪಟ್ಟಿದ್ದಳು.
ಈ ಕುರಿತು ಪ್ರಕರಣ ದಾಖಲಿಸಿಕೊಂಡ ಗ್ರಾಮೀಣ ಠಾಣೆ ಪೊಲೀಸರು ಆರೋಪಿ ರಾಮುನನ್ನು ಬಂಧಿಸಿ ತನಿಖೆ ನಡೆಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಲಯ ತಪ್ಪಿತಸ್ಥನಿಗೆ ಜೀವಾವಧಿ ಶಿಕ್ಷೆ ಹಾಗು 26 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದೆ.
ಓದಿ : ತೈಲ ಬೆಲೆ ಮಾಹಿತಿ.. ಹೀಗಿದೆ ರಾಜ್ಯ ಮತ್ತು ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್, ಡೀಸೆಲ್ ದರ