ಕಲಬುರಗಿ : ಪಿಡಿಒ ಕಾರು ಡಿಕ್ಕಿ ಹೊಡೆದ ಪರಿಣಾಮ ಗ್ರಾಮಸ್ಥನೋರ್ವ ಸಾವನ್ನಪ್ಪಿದ ಘಟನೆ ಆಳಂದ ತಾಲೂಕಿನ ಪಡಸಾವಳಿ ಗ್ರಾಮದಲ್ಲಿ ನಡೆದಿದೆ. ಈ ಘಟನೆಯಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಬಾಬು ದಸ್ತಗೀರ್ ಮುಲಗೆ (60) ಮೃತಪಟ್ಟಿರುವ ವ್ಯಕ್ತಿ ಎಂದು ಗುರುತಿಸಲಾಗಿದೆ. ಪಂಚಾಯತ್ ಅಭಿವೃದ್ಧಿ ಅಧಿಕಾರಿ(ಪಿಡಿಒ) ದಶರತ್ ಪಾತ್ರೆ ಅವರ ಕಾರು ಢಿಕ್ಕಿ ಹೊಡೆದ ಪರಿಣಾಮ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಸಂತೆ ವಿಚಾರವಾಗಿ ಗ್ರಾಮಸ್ಥರು ಹಾಗೂ ಪಿಡಿಒ ನಡುವೆ ಗಲಾಟೆ ನಡೆದಿದೆ. ಗಲಾಟೆ ವಿಕೋಪಕ್ಕೆ ತಿರುಗಿದಾಗ ಗಾಬರಿಗೊಂಡ ಪಿಡಿಒ ತಮ್ಮ ಕಾರು ಚಾಲಕನೊಂದಿಗೆ ಸ್ಥಳದಿಂದ ಎಸ್ಕೇಪ್ ಆಗಲು ಯತ್ನಿಸಿದ್ದಾರೆ. ಗಾಬರಿಯಲ್ಲಿ ಕಾರು ಚಲಾಯಿಸುವಾಗ ಚಾಲಕ ಗ್ರಾಮದ ಬಾಬು ಅವರಿಗೆ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ.
ಕಾರು ಢಿಕ್ಕಿಯಾಗಿ ಗಂಭೀರ ಗಾಯಗಳಾದ ಬಾಬು ದಸ್ತಗೀರ್ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಸದ್ಯ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಎಸ್ಪಿ ಯಡಾ ಮಾರ್ಟಿನ್, ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ ಸೇರಿ ಪೊಲೀಸ್ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.