ಕಲಬುರಗಿ: ಕೃಷಿ ಕಾಯ್ದೆಗಳನ್ನು ವಾಪಸ್(Repeal of farm laws) ಪಡೆದಿರುವ ಪ್ರಧಾನಿ ಮೋದಿ(PM Modi) ಅವರಿಗೆ ನಿಜವಾಗಿಯೂ ರೈತರ ಪರ ಕಾಳಜಿ ಇಲ್ಲ. ಮುಂದೆ ನಡೆಯುವ ಪಂಚರಾಜ್ಯಗಳ ಚುನಾವಣೆಯ ಮೇಲೆ ಪರಿಣಾಮ ಬೀರಬಹುದು ಎನ್ನುವ ಕಾರಣಕ್ಕಾಗಿ ಕಾಯ್ದೆಗಳನ್ನು ವಾಪಸ್ ತೆಗೆದುಕೊಂಡಿದ್ದಾರೆ ಎಂದು ರಾಜ್ಯಸಭಾ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ(Rajyasabha Opposition Leader Mallikarjuna Kharge) ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಾವು ಮಾಡಿದ ಕಾನೂನುಗಳು ಸರಿ ಇವೆ ಎಂಬ ಭಾವನೆ ಈಗಲೂ ಪ್ರಧಾನಿ ಮೋದಿ ಅವರದ್ದಾಗಿದೆ. ಸಂಪುಟದಲ್ಲಿ ಚರ್ಚಿಸದೇ ಕಾಯ್ದೆಗಳನ್ನು ಹಿಂತೆಗೆದುಕೊಂಡಿದ್ದಾರೆ. ಮೋದಿ ತಮಗೆ ತೋಚಿದಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಆಪಾದಿಸಿದರು.
ಕೃಷಿ ಕಾಯ್ದೆಗಳ ವಿರುದ್ಧ ನಡೆದ ಹೋರಾಟದಲ್ಲಿ 700ಕ್ಕೂ ಅಧಿಕ ರೈತರು ಪ್ರಾಣತ್ಯಾಗ ಮಾಡಿದ್ದಾರೆ. ಅವರ ಕುಟುಂಬಗಳು ಬೀದಿಗೆ ಬಿದ್ದಿವೆ. ಅವರಿಗೆ ನ್ಯಾಯ ಕೊಡಿಸುವವರು ಯಾರು ಎಂದು ಪ್ರಶ್ನಿಸಿದರು. ಹೋರಾಟದಿಂದ ದೇಶದಲ್ಲಿ ಕೃಷಿ ಉತ್ಪನ್ನ ಕುಂಠಿತವಾಗಿದೆ. ರೈತರ ಆದಾಯವೂ ಕಡಿಮೆಯಾಗಿದೆ. ಇದು ದೇಶದ ಆರ್ಥಿಕತೆಯ ಮೇಲೂ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಖರ್ಗೆ ಹೇಳಿದರು.
ತಾವು ಮಾಡಿದ್ದೆಲ್ಲವನ್ನೂ ದೇಶ ಮತ್ತು ಪ್ರಪಂಚ ಒಪ್ಪಿಕೊಳ್ಳುತ್ತದೆ ಅನ್ನುವ ಭ್ರಮೆ ಮೋದಿ ಅವರ ತಲೆಯಲ್ಲಿದೆ. ರೈತರ ಬಗ್ಗೆ ಅವರಿಗೆ ನಿಜವಾದ ಕಾಳಜಿ ಇದ್ದಿದ್ರೆ ಮೊದಲೇ ಕಾಯ್ದೆಗಳನ್ನು ವಾಪಸ್ ತೆಗೆದುಕೊಳ್ಳುತ್ತಿದ್ದರು. ಈಗ ತೆಗೆದುಕೊಂಡ ನಿರ್ಧಾರ ಕೇವಲ ರಾಜಕೀಯ ಆಧಾರಿತ, ಚುನಾವಣೆ ಹಿನ್ನೆಲೆಯ ನಿರ್ಣಯ ಎಂದು ಟೀಕಿಸಿದರು.
ಕಟೀಲ್ ಹೇಳಿಕೆ ಬಿಜೆಪಿ ಸಂಸ್ಕೃತಿಯ ಪ್ರತೀಕ
'ಖರ್ಗೆ ಲೂಟಿ ಗ್ಯಾಂಗ್' ಎಂದು ಟೀಕಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ಕುಮಾರ್ ಕಟೀಲ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಕಟೀಲ್ ಅವರ ಹೇಳಿಕೆ ಬಿಜೆಪಿಯ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಅವರ ಬಗ್ಗೆ ಹೆಚ್ಚು ಮಾತನಾಡಲ್ಲ. ಅವರ ಗುರುಗಳು(ಪ್ರಧಾನಿ ಮೋದಿ) ಮಾತನಾಡಿದರೆ ಪ್ರತಿಕ್ರಿಯಿಸುತ್ತೇನೆ. ಇಂಥವರ ಬಗ್ಗೆ ನಮ್ಮ ಪಕ್ಷದ ಯುವ ನಾಯಕರು ಉತ್ತರಿಸುತ್ತಾರೆ ಎಂದಷ್ಟೇ ತಿಳಿಸಿದರು.
ಅರುಣಾಚಲ ಪ್ರದೇಶದಲ್ಲಿ ಚೀನಾ ಉಪಟಳ
ಅರುಣಾಚಲದಲ್ಲಿ ಚೀನಾ ಹಳ್ಳಿ ನಿರ್ಮಾಣ ಮಾಡಿದೆ. ದೇಶದ ಭದ್ರತೆ ವಿಚಾರದ ಬಗ್ಗೆ ಬೀಗುವ ಕೇಂದ್ರ ಸರ್ಕಾರ ಇದನ್ನು ಕಂಡು ಸುಮ್ಮನಿದೆ. ಚೀನಾದ ನಡೆಯ ಬಗ್ಗೆ ಈ ಹಿಂದೆ ರಾಹುಲ್ ಗಾಂಧಿ ಅವರು ಎಚ್ಚರಿಸಿದ್ದರು. ಇದನ್ನು ಕೇಂದ್ರ ಸರ್ಕಾರ ಕಿವಿಗೆ ಹಾಕಿಕೊಳ್ಳಲಿಲ್ಲ ಎಂದು ಹೇಳಿದರು.
ಉತ್ತರಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್ ಸ್ವತಂತ್ರವಾಗಿ ಸ್ಪರ್ಧೆ ಮಾಡಲಿದೆ. ಈ ಬಗ್ಗೆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರೇ ಸ್ಪಷ್ಟನೆ ನೀಡಿದ್ದಾರೆ. ಯುಪಿಯ ಕೆಲವೆಡೆ ಸ್ಥಳೀಯ ಹೊಂದಾಣಿಕೆ ಬಿಟ್ಟರೆ ಉಳಿದೆಲ್ಲೆಡೆ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದು ಖರ್ಗೆ ತಿಳಿಸಿದರು.