ಕಲಬುರಗಿ: ರಾಜ್ಯಾದ್ಯಂತ ಇಂದಿನಿಂದ ಶಾಲೆಗಳಲ್ಲಿ ಚಿಣ್ಣರ ಚಿಲಿಪಿಲಿ ಕಲರವ ಕೇಳಿಬರುತ್ತಿದೆ. ಎಲ್‌ಕೆಜಿ, ಯುಕೆಜಿ ಮತ್ತು ಅಂಗನವಾಡಿ ತರಗತಿಗಳ ಪುನಾರಂಭಕ್ಕೆ ಸರ್ಕಾರ ಅನುಮತಿ ನೀಡಿದ ಹಿನ್ನೆಲೆ ಕಲಬುರಗಿಯಲ್ಲೂ ಸಹ ಉತ್ಸಾಹದಿಂದ ಪುಟಾಣಿಗಳು ಶಾಲೆಗಳತ್ತ ಮುಖ ಮಾಡಿದ್ದಾರೆ.
ಮಹಾಮಾರಿ ಕೊರೋನಾ ಭೀತಿಯಿಂದ ಮುಚ್ಚಲಾಗಿದ್ದ ಶಾಲೆಗಳು ಈಗ ಪುನಾರಂಭ ಮಾಡಿವೆ. ಅದರಂತೆ ಎಲ್ ಕೆ ಜಿ ಹಾಗೂ ಯುಕೆಜಿ ಶಾಲೆಗಳನ್ನು ಆರಂಭಿಸುವಂತೆ ರಾಜ್ಯ ಸರ್ಕಾರ ಮಾರ್ಗಸೂಚಿಗಳನ್ವಯ ಆದೇಶವನ್ನು ಹೊರಡಿಸಿತ್ತು. ಈ ಮೂಲಕ 1 ವರ್ಷ 8 ತಿಂಗಳ ಬಳಿಕ ಶಾಲೆ ಆವರಣದಲ್ಲಿ ಮಕ್ಕಳ ಚಿಲಿಪಿಲಿ ಸದ್ದು ಕೇಳಿಬರುತ್ತಿದೆ.
ಕಲಬುರಗಿ ನಗರದ ಸೇಂಟ್ ಮೇರಿ ಶಾಲೆ ಸೇರಿದಂತೆ ಹಲವೆಡೆ ಪುಟಾಣಿ ಮಕ್ಕಳು ಶಾಲೆ ಧಿರಿಸಿನಲ್ಲಿ ಬ್ಯಾಗ್ಗಳನ್ನು ಹಾಕಿಕೊಂಡು ಆಗಮಿಸಿದರು. ಒಪ್ಪಿಗೆ ಪತ್ರದೊಂದಿಗೆ ಪೋಷಕರು ಮಕ್ಕಳನ್ನು ಶಾಲೆಗೆ ಕರೆತಂದು ಬಿಟ್ಟಿದ್ದಾರೆ. ಬ್ಯಾಗ್ ಹಾಗೂ ಮಾಸ್ಕ್ ಧರಿಸಿ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಾ ಪುಟಾಣಿಗಳು ಪಾಲಕರ ಕೈಹಿಡಿದು ಶಾಲೆಗೆ ಬರುತ್ತಿರುವುದು ನೋಡಲು ಸೊಗಸಾಗಿತ್ತು.
ಕೊರೋನಾ ಇಳಿಕೆ ಕಂಡ ಪರಿಣಾಮ ಮಕ್ಕಳನ್ನು ಪೋಷಕರು ಶಾಲೆಗೆ ಕಳುಹಿಸಲು ಒಪ್ಪಿಕೊಂಡಿದ್ದಾರೆ. ಶಾಲೆ ಇಲ್ಲದ್ದರಿಂದ ಮಕ್ಕಳ ಮನಸ್ಸು ಜಡವಾಗಿತ್ತು. ಮನೆಯಲ್ಲೇ ಕುಳಿತು ಅವರು ಬೇಸತ್ತಿದ್ದರು. ಶಾಲೆಗಳಿಗೆ ಹೋದರೆ ಖುಷಿಯಾಗಿ ಎಲ್ಲರೊಂದಿಗೆ ಬೆರೆತು ಆಟವಾಡುವುದರಿಂದ ಮಕ್ಕಳ ಮನಸ್ಸು ಆಹ್ಲಾದಕರವಾಗಿರಲಿದೆ. ಶಾಲೆ ಪುನಾರಂಭ ನಿರ್ಧಾರಕ್ಕೆ ಪೋಷಕರು ಸಂತಸ ವ್ಯಕ್ತಪಡಿದ್ದಾರೆ.