ಕಲಬುರಗಿ: ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕುರುಬ ಸಮಾಜಕ್ಕೆ ಅವಹೇಳನ ಮಾಡಲಾಗಿದೆ ಎಂದು ಆರೋಪಿಸಿ, ಸಮುದಾಯದಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು. ಅವಹೇಳಕಾರಿಯನ್ನು ಹೇಳಿಕೆಯನ್ನು ಖಂಡಿಸಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಜಿಲ್ಲಾ ಕುರುಬ ಸಮುದಾಯದ ನೇತೃತ್ವದಲ್ಲಿ ನಗರದ ಜಗತ್ ವೃತ್ತದಿಂದ ಡಿಸಿ ಕಚೇರಿಯವರೆಗೆ ಪ್ರತಿಭಟನಾಕಾರರು ಮೆರವಣಿಗೆ ನಡೆಸಿದರು. ಇದೇ ವೇಳೆ ಸಿದ್ದರಾಮಯ್ಯ ಅವರ ಬಗ್ಗೆ ತುಚ್ಛವಾಗಿ ಮಾತನಾಡಿದರೆ ಸುಮ್ಮನಿರುವುದಿಲ್ಲ ಎಂದು ಹೇಳಿದರು.
ಸಿದ್ದರಾಮಯ್ಯ ಅವರನ್ನು ಕುಗ್ಗಿಸಲು ಬಿಜೆಪಿ ಸೇರಿದಂತೆ ಕೆಲವರು ಷಡ್ಯಂತ್ರ ರೂಪಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಪ್ರಾಮಾಣಿಕ ಆಡಳಿತ ನಡೆಸುವ ಮುಖಾಂತರ ದಕ್ಷ ರಾಜಕಾರಣಿ ಎಂದು ಹೆಸರು ಪಡೆದವರು. ಉದ್ದೇಶಪೂರ್ವಕವಾಗಿ ಸಿದ್ದರಾಮಯ್ಯ ಹೇಳಿಕೆಯನ್ನು ತಿರುಚಿ ಸುಳ್ಳು ಅಪಪ್ರಚಾರ ಮಾಡಲಾಗುತ್ತಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಆಂದೋಲ ಸಿದ್ದಲಿಂಗ ಸ್ವಾಮಿ ಹಾಗೂ ಪ್ರಣವಾನಂದ ಸ್ವಾಮಿ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ಹಾಗೂ ಕುರುಬ ಸಮಾಜವನ್ನು ಕೆಣಕಿದರೆ ಸುಮ್ಮನಿರುವುದಿಲ್ಲ ಇದೇ ವೇಳೆ ಎಚ್ಚರಿಕೆ ರವಾನಿಸಿದ್ದಾರೆ.
ಬಸಲಿಂಗಯ್ಯ ಮಠ ಗಡಿಪಾರು ಮಾಡುವಂತೆ ಒತ್ತಾಯ : ಕುರುಬ ಸಮುದಾಯದ ಬಗ್ಗೆ ಅವಾಚ್ಯ ಶಬ್ಧ ಬಳಸಿ ಮಾತನಾಡಿರುವ ಆಳಂದ ತಾಲೂಕಿನ ಜವಳಿ ಗ್ರಾಮದ ಬಸಲಿಂಗಯ್ಯ ಮಠ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಲಾಯಿತು. ಬಸಲಿಂಗಯ್ಯ ಮಠ ಭಾವಚಿತ್ರಕೆ ಬೆಂಕಿ ಹಚ್ಚಿ, ಬಸಲಿಂಗಯ್ಯ ಮಠ ಅವರನ್ನು ಬಂಧಿಸಿ ಗಡಿಪಾರು ಮಾಡುವಂತೆ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಓದಿ : ಹುಬ್ಬಳ್ಳಿ ಉದ್ಯಮಿಗೆ ಮೂರುವರೆ ಕೋಟಿ ವಂಚನೆ : ಹಣ ವಾಪಸ್ ಕೇಳಿದಕ್ಕೆ ಕೊಲೆ ಬೆದರಿಕೆ!