ಕಲಬುರಗಿ: ರಾಜ್ಯ ಚುನಾವಣಾ ಆಯೋಗ ಮಹಾನಗರ ಪಾಲಿಕೆಗಳಿಗೆ ಚುನಾವಣೆ ದಿನಾಂಕ ಘೋಷಣೆ ಮಾಡಿದ ಬೆನ್ನಲ್ಲೇ ರಾಜಕೀಯ ಪಕ್ಷಗಳು ಮಹಾನಗರ ಪಾಲಿಕೆಗಳನ್ನ ತನ್ನ ತೆಕ್ಕೆಗೆ ತೆಗೆದುಕೊಳ್ಳಲು, ಗೆಲುವಿನ ಲೆಕ್ಕಾಚಾರ ಹಾಕಲು ಮುಂದಾಗಿವೆ. ಕಳೆದ 28 ತಿಂಗಳುಗಳಿಂದ ಖಾಲಿ ಉಳಿದಿದ್ದ ಕಲಬುರಗಿ ಮಹಾನಗರ ಪಾಲಿಕೆಗೆ ಚುನಾವಣೆ ಘೋಷಣೆ ಆಗಿದೆ. ಆ.16 ರಿಂದ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಿರುವ ಹಿನ್ನೆಲೆ ನಗರದಲ್ಲಿ ಚುನಾವಣಾ ಚಟುವಟಿಕೆಗಳು ಗರಿಗೆದರಿವೆ.
ಹೌದು, ಬಿಸಿಲೂರು ಕಲಬುರಗಿ ಮಹಾನಗರದಲ್ಲಿ ಪಾಲಿಕೆ ಚುನಾವಣಾ ಕಣ ರಂಗೇರತೊಡಗಿದೆ. ವಾರ್ಡ್ಗಳ ಪುನರ್ ವಿಂಗಡಣೆ, ಮೀಸಲಾತಿ ವಿವಾದ ಕಾರಣ ಮಾಜಿ ಪಾಲಿಕೆ ಸದಸ್ಯರು ಹೈಕೋರ್ಟ್ ಮೊರೆ ಹೋಗಿದ್ದರು. ಹಾಗಾಗಿ ಕಳೆದ 28 ತಿಂಗಳಿನಿಂದ ಕಲಬುರಗಿ ಮಹಾನಗರ ಪಾಲಿಕೆಗೆ ಚುನಾವಣೆ ನಡೆದಿರಲಿಲ್ಲ. ಇದೀಗ ಹೈಕೋರ್ಟ್ ಮಧ್ಯ ಪ್ರವೇಶದಿಂದ ಚುನಾವಣಾ ದಿನಾಂಕ ಪ್ರಕಟವಾಗಿದೆ.
ಹೀಗಿದೆ ಮತದಾರರ ಲೆಕ್ಕಾಚಾರ
ಕಲಬುರಗಿ ಮಹಾನಗರ ಪಾಲಿಕೆಯಲ್ಲಿ 55 ವಾರ್ಡ್ಗಳಿದ್ದು, 5,19,464 ಮತದಾರರಿದ್ದಾರೆ. ಇದರಲ್ಲಿ 2,58,775 ಪುರುಷ, 26,0543 ಮಹಿಳಾ ಮತದಾರರು ಹಾಗೂ 146 ಮಂದಿ ಜನ ಇತರ ಮತದಾರರಿದ್ದಾರೆ. ಮತದಾನಕ್ಕಾಗಿ 533 ಮತ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ.
ಆ.16 ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ಆ.23 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಆ. 24 ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಉಮೇದುವಾರಿಕೆ ವಾಪಸ್ ಪಡೆಯಲು ಆ.26 ಕೊನೆ ದಿನ. ಸೆ.3 ರಂದು ಪಾಲಿಕೆಗೆ ಚುನಾವಣೆ ಮತದಾನ ನಡೆಯಲಿದೆ. ಶಾಂತಿಯುತ, ಪಾರದರ್ಶಕ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸಲು ಜಿಲ್ಲಾಡಳಿತ ಸಕಲ ರೀತಿಯ ಸಿದ್ಧತೆಯಲ್ಲಿ ತೊಡಗಿದೆ.
ರಾಜಕೀಯ ಪಕ್ಷಗಳಿಂದ ರಣತಂತ್ರ
ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಪಾರುಪತ್ಯ ಸಾಧಿಸಲು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿ ಇತರ ವಿವಿಧ ರಾಜಕೀಯ ಪಕ್ಷಗಳು ತಮ್ಮದೆ ಸ್ಟ್ಯಾಟರ್ಜಿಯೊಂದಿಗೆ ಗೆಲುವಿಗಾಗಿ ರಣತಂತ್ರ ರೂಪಿಸುತ್ತಿವೆ. ಚುನಾವಣೆ ದಿನಾಂಕ ಪ್ರಕಟವಾಗುತ್ತಿದ್ದಂತೆ ಟಿಕೆಟ್ ಪಡೆಯಲು ಅಭ್ಯರ್ಥಿ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದರೆ, ಇತ್ತ ಗೆಲ್ಲುವ ಕುದುರೆಗಾಗಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರೂ ಪಕ್ಷಗಳು ಅಭ್ಯರ್ಥಿಗಳನ್ನ ಫಿಲ್ಟರ್ ಮಾಡುತ್ತಿವೆ. ಕಳೆದ ಬಾರಿ ಪಕ್ಷೇತರ ಬೆಂಬಲದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಕಾಂಗ್ರೆಸ್ಗೆ ಟಕ್ಕರ್ ಕೊಟ್ಟು, ಪಾಲಿಕೆಯನ್ನ ತೆಕ್ಕೆಗೆ ಪಡೆಯಲು ಬಿಜೆಪಿ ಕೂಡ ಶತ ಪ್ರಯತ್ನದಲ್ಲಿದೆ.
ವಿಜಯೇಂದ್ರರಿಂದ ಗೆಲ್ಲಲು ಕಾರ್ಯತಂತ್ರ
ಬಿ.ವೈ.ವಿಜಯೇಂದ್ರ ಮಹಾನಗರ ಪಾಲಿಕೆ ಚುನಾವಣಾ ದಿನಾಂಕ ಘೋಷಣೆ ಬೆನ್ನಲ್ಲೆ ಕಲಬುರಗಿಗೆ ಭೇಟಿ ನೀಡಿ ಚುನಾವಣಾ ರಣತಂತ್ರ ರೂಪಿಸಿದ್ದಾರೆ. ಕಲಬುರಗಿಯ ವಾರ್ಡ್ಗಳ ಮತ್ತು ನಗರ ಘಟಕ ಬಿಜೆಪಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಕಾರ್ಯಕರ್ತರೊಂದಿಗೆ ಸಭೆ ನಡೆಸಿ ಚುನಾವಣೆ ಗೆಲ್ಲಲು ತಂತ್ರ ಹೆಣೆಯುತ್ತಿದ್ದಾರೆ. ಈ ಬಾರಿ ಪಾಲಿಕೆಗಳ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಭಾರಿಸುವ ವಿಶ್ವಾಸವಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.