ಸೇಡಂ: ಸಾವಿರಾರು ಕುಟುಂಬಗಳ ಆಶಾದೀಪವಾಗಿದ್ದ ತಾಲೂಕಿನ ಕುರಕುಂಟಾ ಗ್ರಾಮದ ಸಿಸಿಐ (ಸಿಮೆಂಟ್ ಕಾರ್ಪೋರೇಶನ್ ಆಫ್ ಇಂಡಿಯಾ) ಸಿಮೆಂಟ್ ಘಟಕ ಪುನರ್ ಆರಂಭವಾಗುವುದೋ ಅಥವಾ ಖಾಸಗಿಯವರಿಗೆ ಮಾರಾಟವಾಗುವುದೊ? ಎಂಬ ಪ್ರಶ್ನೆ ಈಗ ಜನರನ್ನು ಕಾಡತೊಡಗಿದೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಕುರಕುಂಟಾ ಸಿಸಿಐ ಕಾರ್ಖಾನೆಯಲ್ಲಿ ಬುಧವಾರ ಜಿಲ್ಲಾಧಿಕಾರಿ ವಿಜಯಾ ಜ್ಯೋತ್ಸ್ನಾ ಅವರ ಅಧ್ಯಕ್ಷತೆಯಲ್ಲಿ ಪರಿಸರ ಸಾರ್ವಜನಿಕ ಸಭೆ ನಡೆಯಿತು. ಉದ್ದೇಶಿತ ಗಣಿಗಾರಿಕೆ ಪ್ರದೇಶದ ಜನರ ಸಲಹೆ ಮತ್ತು ಅನಿಸಿಕೆಗಳನ್ನು ಪಡೆಯಲಾಯಿತು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ವಿಜಯಾ ಜ್ಯೋತ್ಸ್ನಾ, ಕಾರೆಘಟ್ಟ ಲೈಮಸ್ಟೋನ್ ಮೈನ್ 52.81 ಹೆಕ್ಟೇರ್ ಪ್ರದೇಶವನ್ನು 1.0 ಎಂ.ಟಿ.ಪಿ.ಎ ಸಾಮರ್ಥ್ಯದ ಸುಣ್ಣದ ಕಲ್ಲು ಗಣಿಗಾರಿಕೆ ಮಾಡಲು ಸಿಮೆಂಟ್ ಕಾರ್ಪೊರೇಶನ್ ಆಫ್ ಇಂಡಿಯಾ ಲಿಮಿಟೆಡ್ ಉದ್ದೇಶಿಸಿದೆ. ಸದರಿ ಯೋಜನೆಯಿಂದ ಸಾರ್ವಜನಿಕರ ಮೇಲಾಗುವ ದುಷ್ಪರಿಣಾಮಗಳ ಕುರಿತು ಚರ್ಚಿಸಲು ಸಭೆ ನಡೆಸಲಾಗುತ್ತಿದೆ. ಯಾವುದೇ ಸಲಹೆ, ದೂರುಗಳಿದ್ದಲ್ಲಿ ತಿಳಿಸುವಂತೆ ಕೋರಿದರು.
ನಿವಾಸಿ ವೆಂಕಟೇಶ ಸೊಂತ ಮಾತನಾಡಿ, ಮಾಲಿನ್ಯ ನಿಯಂತ್ರಣ ಮಂಡಳಿ ಸರಿಯಾದ ರೀತಿಯಲ್ಲಿ ಸ್ಪಂದಿಸುವುದಿಲ್ಲ. ಕೆಲಸದ ಮುಂಚೆ ಒಂದು ರೀತಿ, ಕೆಲಸವಾದ ಮೇಲೆ ಒಂದು ರೀತಿ ವರ್ತಿಸಿ ಜನರನ್ನು ಮೋಸ ಮಾಡುತ್ತಾರೆ ಎಂದು ದೂರಿದರು.
ಕುರಕುಂಟಾ ಹೋರಾಟ ಸಮಿತಿ ಅಧ್ಯಕ್ಷ ಶರಣಪ್ಪ ಕೊಳ್ಳಿ ಮಾತನಾಡಿ, ಸಿಮೆಂಟ್ ಕಾರ್ಖಾನೆ ಪ್ರಾರಂಭಿಸಲಿ ಅಥವಾ ಮಾರಾಟ ಮಾಡಲಿ ಆದರೆ ಗಣಿ ಗುತ್ತಿಗೆಯನ್ನು ಕರಾರುವಕ್ಕಾಗಿ ನೀಡಬೇಕು. ಭೂಮಿ ಕೊಟ್ಟ ರೈತರಿಗೆ ಅನ್ಯಾಯವಾಗದಂತೆ ನೋಡಬೇಕು ಎಂದು ಹೇಳಿದರು.
ಮುಖಂಡ ವಿಶ್ವನಾಥರೆಡ್ಡಿ ಪಾಟೀಲ ಮಾತನಾಡಿ, ಗಣಿಗಾರಿಕೆಯ ಸಂಪೂರ್ಣ ಮಾಹಿತಿಯನ್ನು ಸಾರ್ವಜನಿಕರಿಗೆ ಸಲ್ಲಿಸುವ ಕೆಲಸವಾಗಬೇಕು. ಕಾನೂನಿನ ಪರಿದಿಯಲ್ಲೇ ಗಣಿಗಾರಿಕೆ ನಡೆಯಬೇಕು ಎಂದು ಹೇಳಿದರು. ಪಾಪಯ್ಯಗೌಡ ಮದಕಲ್ ಮಾತನಾಡಿ, ಗಣಿಯ ಸಮೀಪದ ಸರ್ವೆ ನಂಬರ್ ಬಿಟ್ಟು, ದೂರದ ಸರ್ವೆ ನಂಬರ್ ಪರಿಗಣಿಸಿರುವುದು ಅನ್ಯಾಯ ಮಾಡಿದಂತಾಗಿದೆ. ಕೂಡಲೇ ಲೋಪದೋಷ ಸರಿಪಡಿಸುವಂತೆ ಆಗ್ರಹಿಸಿದರು.