ಕಲಬುರಗಿ : ನಿನ್ನೆ ತಡರಾತ್ರಿ ನಗರದ ಕಾಂಗ್ರೆಸ್ ಭವನದ ಬಳಿ ನಡೆದ ಬರ್ಬರ ಹತ್ಯೆಯ ಹಿಂದೆ ದ್ವೇಷದ ಜ್ವಾಲೆ ಇದೆ ಎಂಬ ಸಂಶಯ ವ್ಯಕ್ತವಾಗಿದೆ. ರವಿ ಪೂಜಾರಿ ಹತ್ಯೆಯ ಹಿಂದೆ ಮೃತ ಶಿಬರಾಣಿಯ ಸಹೋದರನ ಕೈವಾಡವಿದೆ ಎಂಬ ಅನುಮಾನ ಪೊಲೀಸರನ್ನ ಕಾಡುತ್ತಿದೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಡಿಸಿಪಿ ಅಡ್ಡೂರು ಶ್ರೀನಿವಾಸುಲು, ಕೊಲೆಯಾದ ಯುವಕ ರವಿ ಪೂಜಾರಿ 2019ರಲ್ಲಿ ಫೈನ್ ಆರ್ಟ್ ಓದುತ್ತಿದ್ದ ಶಿಬರಾಣಿ ಎಂಬ ಯುವತಿಯನ್ನು ಪ್ರೀತಿಸಿ ಗರ್ಭಿಣಿ ಮಾಡಿದ್ದ.
ನಂತರ ಒತ್ತಾಯಪೂರ್ವಕವಾಗಿ ಖಾಸಗಿ ಆಸ್ಪತ್ರೆಯೊಂದರಲ್ಲಿ ಗರ್ಭಪಾತ ಮಾಡಿಸಿದ್ದ. ಈ ವೇಳೆ ಯುವತಿ ತೀವ್ರ ರಕ್ರಸ್ರಾವದಿಂದ ಸಾವನ್ನಪ್ಪಿದ್ದಳು. ನಂತರ ಶಿಬರಾಣಿಯ ಮೃತದೇಹವನ್ನು ಕಾರಿನಲ್ಲಿ ಹೈದ್ರಾಬಾದ್ ನಗರದ ಸಮೀಪ ಕೊಂಡ್ಯೊಯ್ದು ಪೆಟ್ರೋಲ್ ಹಾಕಿ ಸುಟ್ಟು ಹಾಕಿದ್ದ. ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಂಡಿದ್ದ ಬ್ರಹ್ಮಪುರ ಠಾಣೆ ಪೊಲೀಸರು ಆರೋಪಿ ರವಿ ಪೂಜಾರಿಯನ್ನು ಬಂಧಿಸಿದ್ದರು.
ಇದೇ ವರ್ಷ ಫೆಬ್ರವರಿ ತಿಂಗಳಲ್ಲಿ ರವಿ ರಾಜಾಪುರ ಅಲಿಯಾಸ್ ರವಿ ಪೂಜಾರಿ ಜೈಲಿನಿಂದ ಜಾಮೀನಿನ ಮೇಲೆ ಹೊರ ಬಂದಿದ್ದ. ಮೊನ್ನೆ ರಾತ್ರಿ 12ಗಂಟೆ ಸುಮಾರಿಗೆ ನಗರದ ಕಾಂಗ್ರೆಸ್ ಭವನದ ಮುಂಭಾಗದ ರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ರವಿಯನ್ನು ಹತ್ಯೆ ಮಾಡಲಾಗಿದೆ. ಸದ್ಯ ಪೊಲೀಸರು ರವಿ ಪೂಜಾರಿಯನ್ನು ಶಿಬರಾಣಿಯ ಸಹೋದರನೇ ಹತ್ಯೆ ಮಾಡಿರುವ ಶಂಕೆ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಪೂರಕ ಎಂಬುವಂತೆ ರವಿ ಸಂಬಂಧಿಕರು ಕೂಡ ಮೃತ ಯುವತಿಯ ಸಹೋದರ ಜಾನ್ ಅಲಿಯಾಸ್ ಚಿಂಟು ಮೇಲೆ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದಾರೆ. ರವಿ ಪೋಷಕರು ನೀಡಿದ ದೂರಿನ ಅನ್ವಯ ಪೊಲೀಸರು ತನಿಖೆ ಆರಂಭಿಸಿದ್ದಾರೆ.