ಕಲಬುರಗಿ : ಆಶಾ ಕಾರ್ಯಕರ್ತರ ಮೇಲೆ ಹಲ್ಲೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಶರತ್ ಬಿ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಅವರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಜಿಲ್ಲಾಧಿಕಾರಿ ಆದೇಶದ ಮೇರೆಗೆ ಆರೋಗ್ಯ ತಪಾಸಣೆಗಾಗಿ ತೆರಳಿರುತ್ತಾರೆ. ಅವರ ಮೇಲೆ ಹಲ್ಲೆಗೆ ಯತ್ನಿಸಿರುವುದು ಬೇಸರದ ಸಂಗತಿ. ಈ ಪ್ರಕರಣವನ್ನು ಜಿಲ್ಲಾಧಿಕಾರಿ ಮೇಲೆ ಮಾಡಿದಂತಹ ಹಲ್ಲೆ ಎಂದು ಪರಿಗಣಿಸಿ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು. ಮತ್ತೆ ಯಾರಾದರೂ ಇಂತಹ ದುಸ್ಸಾಹಸಕ್ಕೆ ಕೈ ಹಾಕಿದ್ರೆ ಯಾವುದೇ ರೀತಿಯ ಅನುಕಂಪ ತೋರಿಸದೇ ಅಂಥವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದಿದ್ದಾರೆ.
ಜಿಲ್ಲಾಡಳಿತವು ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರನ್ನು ಹೋಂ ಕ್ವಾರಂಟೈನ್ನಲ್ಲಿರುವವರ ಆರೋಗ್ಯ ತಪಾಸಣೆಗೆ ನಿಯೋಜಿಸಲಾಗಿದೆಯೇ ಹೊರತು ಯಾವುದೇ ಜನಗಣತಿ ಅಥವಾ ಎನ್ಪಿಆರ್ ಸಂಬಂಧಿಸಿದ ಕೆಲಸ ಮಾಡಿಸುತ್ತಿಲ್ಲ. ಇದಕ್ಕೆ ಬೇರೆ ರೀತಿಯ ಬಣ್ಣ ಹಚ್ಚಿ ಸಿಬ್ಬಂದಿಗೆ ಸಮಸ್ಯೆ ಉಂಟುಮಾಡಿದರೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಡಿಸಿ ಶರತ್ ಬಿ ಎಚ್ಚರಿಸಿದ್ದಾರೆ.