ಕಲಬುರಗಿ: ತುರ್ತು ಕಾರ್ಯ ಹೊರತುಪಡಿಸಿ ಮನೆಯಿಂದ ಯಾರು ಹೊರಗಡೆ ಬರಬಾರದು ಎಂದು ಜಿಲ್ಲಾಧಿಕಾರಿ ಬಿ.ಶರತ್ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಸೊಂಕಿತ ಮೃತನ ಅಂತ್ಯಕ್ರಿಯೆಗೆ ಬಂದವರು ಸೇರಿ, 71 ಜನರಿಗೆ ಚಿಕಿತ್ಸೆ(ಐಸೋಲೇಷನ್) ನೀಡಿ ನಿಗಾ ವಹಿಸಲಾಗಿದೆ. ಕೊರೊನಾ ವೈರಸ್ ದಿನದಿಂದ ದಿನಕ್ಕೆ ಹರಡುತ್ತಿದ್ದು, ಇನ್ನೂ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ಸಾರ್ವಜನಿಕರು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು. ದಿನೋಪಯೋಗಿ ವಸ್ತುಗಳಾದ ತರಕಾರಿ, ಕಿರಾಣಿ, ಮೆಡಿಕಲ್ ವಸ್ತುಗಳನ್ನು ಖರೀದಿಸುವುದನ್ನು ಬಿಟ್ಟು ಇನ್ನುಳಿದ ಯಾವುದೇ ವಸ್ತು ಖರೀದಿಸಲು ಮನೆಯಿಂದ ಹೊರಗಡೆ ಬರಬಾರದು. ಅಗತ್ಯ ವಸ್ತು ಮಾರಾಟಗಾರರು ಹೊರತುಪಡಿಸಿ ಉಳಿದ ವ್ಯಾಪಾರಸ್ಥರು ತಮ್ಮ ಅಂಗಡಿ ಮುಚ್ಚುವಂತೆ ಸಲಹೆ ನೀಡಿದರು.
ಇನ್ನು ಯಾವುದೇ ವಸ್ತು ಖರೀದಿಸಲು ಮನೆಯಿಂದ ನಾಲ್ಕೈದು ಜನ ಒಟ್ಟಿಗೆ ಸೇರಿ ಬರಬಾರದು. ಒಬ್ಬರು ಮಾತ್ರ ಬಂದು ಅವಶ್ಯಕ ವಸ್ತು ಖರೀದಿಸಬೇಕು. ಹೀಗಾಗಿ ಅಘೋಷಿತ ಕರ್ಫ್ಯೂ ರೀತಿಯಲ್ಲಿ ಇರುವಂತೆ ಕರೆ ನೀಡಿದರು.
ಆರ್‌ಟಿಒ ನೊಂದಣಿ, ತಹಶೀಲ್ದಾರ್ ಕಚೇರಿ ಸೇರಿ ಸರ್ವಿಸ್ ಬೇಸ್ ಕಾರ್ಯಗಳನ್ನು ಸ್ಥಗಿತಗೊಳಿಸಲಾಗಿದೆ. ವಿದೇಶದಿಂದ ಮರಳಿದವರು ಅವರ ಕುಟುಂಬಸ್ಥರ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಸ್ವಯಂಪ್ರೇರಿತ ತಪಾಸಣೆ ಮಾಡಿಸಿಕೊಳ್ಳಬೇಕು. ಮದುವೆ, ಸಭೆ-ಸಮಾರಂಭಗಳು ಸೇರಿ ಚಿಕ್ಕಪುಟ್ಟ ಸಮಾರಂಭಗಳಿಗೂ ಜಿಲ್ಲಾಡಳಿತದಿಂದ ಅನುಮತಿ ಪಡೆಯಬೇಕು. ತುರ್ತು ಪರಿಸ್ಥಿತಿ ಹೊರತುಪಡಿಸಿ ಬೇರೆ ಜಿಲ್ಲೆಯಿಂದ ಜನರು ಬರಬಾರದು. ಇಲ್ಲಿಯ ಜನ ಹೊರಗೆ ಹೋಗಬಾರದು ಎಂದು ಕರೆ ನೀಡಿದರು.