ಕಲಬುರಗಿ: ಪರ್ಸಂಟೇಜ್ ವಿಚಾರವಾಗಿ ಪ್ರಧಾನಿ ಮೋದಿಗೆ ಗುತ್ತಿಗೆದಾರರು ಬರದಿದ್ದ ಪತ್ರ ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು. ಇದೀಗ ಕಲಬುರಗಿ ಜಿಲ್ಲೆಯಲ್ಲೂ ಪರ್ಸಂಟೇಜ್ ಕಾಟಕ್ಕೆ ಗುತ್ತಿಗೆದಾರರು ನಲುಗಿ ಹೋಗಿದ್ದಾರೆ.
ಗುತ್ತಿಗೆದಾರರು ಹೇಳೋದೇನು?
ಟೆಂಡರ್ನಿಂದ ಹಿಡಿದು ಬಿಲ್ ವಿಚಾರದವರೆಗೂ ಅಧಿಕಾರಿಗಳು, ಜನಪ್ರತಿನಿಧಿಗಳು ಶೇ 10-20 ಕಮಿಷನ್ ಫಿಕ್ಸ್ ಮಾಡಿದ್ದಾರೆ ಅಂತ ಗುತ್ತಿಗೆದಾರರು ಗಂಭೀರ ಆರೋಪ ಮಾಡಿದ್ದಾರೆ. ಪರ್ಸಂಟೇಜ್ ಕಾರಣ ಬಿಲ್ಗಳನ್ನು ಪಾಸ್ ಮಾಡದೇ ಸತಾಯಿಸುತ್ತಿದ್ದು, ಕಲಬುರಗಿ ಜಿಲ್ಲೆಯಲ್ಲಿ ಬಿಲ್ ಪಾವತಿ ಮಾಡದೇ ಬರೋಬ್ಬರಿ 2 ಸಾವಿರ ಕೋಟಿ ಬಿಲ್ ಅನ್ನು ಬಾಕಿ ಉಳಿಸಲಾಗಿದೆ ಅಂತ ಗುತ್ತಿಗೆದಾರರು ಆರೋಪಿಸಿ, ಆಕ್ರೋಶ ಹೊರಹಾಕ್ತಿದ್ದಾರೆ. ಸಾಲ ಮಾಡಿಕೊಂಡು ಕೆಲಸ ಮಾಡಿದ್ದೇವೆ, ಆದ್ರೆ ಬಿಲ್ ತೀರಿಸದಿದ್ದಕ್ಕೆ ಸಂಕಷ್ಟದಲ್ಲಿ ಸಿಲುಕಿದ್ದೇವೆ ಎಂದು ಹೇಳಿಕೊಂಡಿದ್ದಾರೆ.
ಖಡಕ್ ಎಚ್ಚರಿಕೆ:
ವಿವಿಧ ಇಲಾಖೆಯಲ್ಲಿ ಕೆಲಸ ಮಾಡಿರುವ ನೂರಾರು ಗುತ್ತಿಗೆದಾರರು ಬಿಲ್ ಆಗದೇ ಅಕ್ಷರಶಃ ಕಂಗಾಲಾಗಿದ್ದಾರೆ. ಅಧಿಕಾರಿಗಳು, ಜನಪ್ರತಿನಿಧಿಗಳು ತಮಗೆ ಬೇಕಾದವರಿಗೆ ಟೆಂಡರ್ ಕೊಡಲು ಹುನ್ನಾರ ನಡೆಸುತ್ತಾರೆ. ಪ್ರತಿಯೊಂದು ಕಾಮಗಾರಿಯಲ್ಲಿ ಶೇ 10 ರಿಂದ 20 ಕೊಡದಿದ್ದರೆ ಬಿಲ್ ಬಾಕಿ ಇಟ್ಟು ಸತಾಯಿಸುತ್ತಿದ್ದಾರೆ. ಈ ಅಧಿಕಾರಿಗಳಿಗೆ ಕ್ವಾಲಿಟಿ ವರ್ಕ್ ಬೇಕಿಲ್ಲ, ಯಾರು ಪರ್ಸೆಂಟೇಜ್ ಕೊಡ್ತಾರೆ ಅವರಿಗೆ ಟೆಂಡರ್ ನೀಡ್ತಾರೆ, ಬಿಲ್ ಕೂಡ ಪಾಸ್ ಮಾಡುತ್ತಾರೆ ಅಂತಾ ಅಧಿಕಾರಿಗಳ, ಜನಪ್ರತಿನಿಧಿಗಳ ಭ್ರಷ್ಟಾಚಾರ ಹೊರಹಾಕಿದ್ದಾರೆ.
ಪರ್ಸೆಂಟೇಜ್ ಹಾವಳಿಗೆ ತತ್ತರಿಸಿರುವ ಗುತ್ತಿಗೆದಾರರು ಬಿಲ್ ಮಾಡದಿದ್ರೆ, ಆಯಾ ಕಚೇರಿಗಳ ಮುಂದೆ ಹೋರಾಟ ನಡೆಸುವುದಾಗಿ ಅಧಿಕಾರಿಗಳಿಗೆ ಹಾಗು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಬಾಸಿಸಂ ಬಿಟ್ಟು ಜನರ ಕೆಲಸ ಮಾಡಿ: ಜಿಲ್ಲಾಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ಪಾಠ ಹೀಗಿತ್ತು..
ಬಿಜೆಪಿ ಸರ್ಕಾರ ಬಂದ ಮೇಲೆ ಪರ್ಸೆಂಟೇಜ್ ಹಾವಳಿ ಹೆಚ್ಚಾಗಿದೆ. ಗುತ್ತಿಗೆದಾರರನ್ನು ಸುಲಿಗೆ ಮಾಡಲಾಗ್ತಿದೆ ಅಂತ ಗುತ್ತಿಗೆದಾರರು ದೂರಿದರು.