ಕಲಬುರಗಿ: ದಿನನಿತ್ಯ ಬೆರಳೆಣಿಕೆಯಷ್ಟು ಮಾತ್ರ ಜನರಿರುತ್ತಿದ್ದ ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಆವರಣ ನಿನ್ನೆ ಜನರಿಂದ ತುಂಬಿತುಳುಕುತ್ತಿತ್ತು. ಅಷ್ಟೇ ಅಲ್ಲ, ಜನರು ಆಗಮಿಸುತ್ತಲೇ ಹೇಳಿ ಏನು ನಿಮ್ಮ ಪ್ರಾಬ್ಲಂ ಅಂತ ಕೇಳೋಕೆ ಅಧಿಕಾರಿಗಳು ಅಂಗಳದಲ್ಲಿಯೇ ನಿಂತಿದ್ರು. ಹೌದು, ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ಮತ್ತು ಸರ್ಕಾರದ ಸೇವೆ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕಲಬುರಗಿ ಜಿಲ್ಲಾಡಳಿತ ಮುಂದಾಗಿದೆ.
ಅದಕ್ಕಾಗಿ ಜಿಲ್ಲಾಧಿಕಾರಿ ಯಶವಂತ ಗುರುಕರ್ ಅವರು ವಿನೂತನವಾಗಿ ರಾಜ್ಯದಲ್ಲೇ ಮೊಟ್ಟ ಮೊದಲ ಬಾರಿಗೆ ಕಲಬುರಗಿ ಜಿಲ್ಲೆಯಲ್ಲಿ 'ಸ್ಪಂದನ ಕಲಬುರಗಿ' ಎಂಬ ಕಾರ್ಯಕ್ರಮವನ್ನು ಪ್ರಾಯೋಗಿಕವಾಗಿ ಜಾರಿಗೆ ತಂದಿದ್ದಾರೆ. ಸಾರ್ವಜನಿಕರ ಸಮಸ್ಯೆಗಳನ್ನು ಅಧಿಕಾರಿಗಳ ಸಮಕ್ಷಮದಲ್ಲಿ ಖುದ್ದಾಗಿ ಆಲಿಸಲು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಒಟ್ಟು 24 ಸ್ಟಾಲ್‌ಗಳನ್ನು ನಿರ್ಮಿಸಲಾಗಿದೆ. ಕೃಷಿ, ತೋಟಗಾರಿಕೆ, ರೇಷ್ಮೆ, ಕಂದಾಯ, ಮಹಾನಗರ ಪಾಲಿಕೆ, ಜಿಲ್ಲಾ ಪಂಚಾಯಿತಿ, ಆರೋಗ್ಯ, ಭೂದಾಖಲೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ 24 ಪ್ರಮುಖ ಇಲಾಖೆಗಳ ಸಿಬ್ಬಂದಿ ಇಂದು ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸಿದ್ದಾರೆ.
ಸ್ಥಳದಲ್ಲೇ ಸಮಸ್ಯೆಗೆ ಸ್ಪಂದನೆ: ಆಡಳಿತಕ್ಕೆ ವೇಗ ನೀಡಲು ಮತ್ತು ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಸ್ಪಂದಿಸಲು ಸ್ಪಂದನ ಕಲಬುರಗಿ ಎಂಬ ಪ್ರಯೋಗಾತ್ಮಕ ಕಾರ್ಯಕ್ರಮ ಜನರಿಗಾಗಿ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರಿಂದ ಸ್ವೀಕರಿಸಿದ ಅರ್ಜಿಗಳನ್ನು ವಿಲೇವಾರಿ ಮಾಡಿ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಅಂತಾರೆ ಜಿಲ್ಲಾಧಿಕಾರಿ ಯಶವಂತ ಗುರುಕರ್.
ಸಾರ್ವಜನಿಕರು ಸಮಸ್ಯೆಗಳ ಮತ್ತು ಆಗದೇ ಇರೋ ಕೆಲಸಗಳ ಬಗ್ಗೆ ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಿರ್ಮಿಸಲಾಗಿರುವ ಸ್ಟಾಲ್‌ಗಳಲ್ಲಿ ಸಲ್ಲಿಸಲು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2.30ರವರೆಗೆ ಸಮಯ ನಿಗದಿಪಡಿಸಲಾಗಿದೆ. ಸ್ಪಂದನ ಕಲಬುರಗಿ ವಿನೂತನ ಕಾರ್ಯಕ್ರಮ ಆಯೋಜನೆ ಬಗ್ಗೆ ಮುಂಚಿತವಾಗಿಯೇ ಜಿಲ್ಲಾಧಿಕಾರಿ ಕಚೇರಿಯಿಂದ ಪತ್ರಿಕೆಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡಿದ್ದರಿಂದ, ಇಂದು ಸ್ಪಂದನ ಕಲಬುರಗಿ ಕಾರ್ಯಕ್ರಮಕ್ಕೆ ಜನಸಾಗರವೇ ಹರಿದುಬರುತ್ತಿದೆ.
ಕಾರ್ಯಕ್ರಮ ದಿನವೊಂದಕ್ಕೆ ಸೀಮಿತವಾಗದಿರಲಿ: ಸಣ್ಣ ಕೆಲಸಕ್ಕಾಗಿ ಹತ್ತಾರು ದಿನಗಳು, ತಿಂಗಳಗಟ್ಟಲೇ ಇಲಾಖೆಗಳಿಗೆ ಅಲೆದಾಡಿದ್ರು ಸೂಕ್ತ ಸ್ಪಂದನೆ ಸಿಗದೇ ಇರೋ ಜನ ಬುಧವಾರ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಜಿಲ್ಲಾಧಿಕಾರಿಗಳ ವಿನೂತನ ಕಾರ್ಯಕ್ರಮಕ್ಕೆ ಸಮಸ್ಯೆ ಹೊತ್ತು ತಂದಿದ್ದ ಜನ ಬಹುಪರಾಕ್ ಎಂದಿದ್ದಾರೆ. ಇಂತಹ ಕಾರ್ಯಕ್ರಮ ದಿನವೊಂದಕ್ಕೆ ಸೀಮಿತವಾಗದೆ, ದಿನನಿತ್ಯ ಕಚೇರಿಗೆ ಅಲೆದಾಡುವ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಅಧಿಕಾರಿಗಳು ಮಾಡಬೇಕು ಎನ್ನುತ್ತಾರೆ ಸಾರ್ವಜನಿಕರು.
ಸ್ಪಂದನ ಕಲಬುರಗಿಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಸ್ಟಾಲ್‌ಗಳಲ್ಲಿ ಕೃಷಿ ಇಲಾಖೆಯಿಂದ ಸಬ್ಸಿಡಿ ಮೇಲೆ ಕೃಷಿ ಯಂತ್ರೋಪಕರಣಗಳು, ಟ್ರ್ಯಾಕ್ಟರ್ ಸೇರಿದಂತೆ ಹಲವು ಉಪಕರಣಗಳ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆ ಕೂಡ ಕಲ್ಪಿಸಲಾಗಿತ್ತು. ಒಟ್ಟಿನಲ್ಲಿ ಬೆರಳೆಣಿಕೆಯಷ್ಟು ಜನರಿಂದ ಇರುತ್ತಿದ್ದ ಜಿಲ್ಲಾಧಿಕಾರಿ ಕಚೇರಿ ಆವರಣ ಇಂದು ಸಾರ್ವಜನಿಕರಲ್ಲದೇ ಜಿಲ್ಲಾಮಟ್ಟದ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ: ಸುವರ್ಣ ವಿಧಾನಸೌಧಕ್ಕೆ ಡಿಸಿ ದಿಢೀರ್ ಭೇಟಿ.. ಘನತೆ ಕಾಪಾಡಲು ಕಟ್ಟುನಿಟ್ಟಿನ ಸೂಚನೆ