ಕಲಬುರಗಿ: ಬಿಸಿಲನ್ನು ಲೆಕ್ಕಿಸದೆ ಮಕ್ಕಳು ಸೇರಿ 57 ಮಂದಿ ವಲಸೆ ಕಾರ್ಮಿಕರು ರಾಯಚೂರ ಜಿಲ್ಲೆಯ ಮಾನ್ವಿಯಿಂದ ಸುಮಾರು 500 ಕಿ.ಮೀ ದೂರದಲ್ಲಿರುವ ಮಹಾರಾಷ್ಟ್ರದ ರಾಯಗಢ ಜಿಲ್ಲೆಗೆ ನಡೆದುಕೊಂಡೇ ಹೋಗುತ್ತಿದ್ದಾರೆ.
ಮಾನ್ವಿಯಿಂದ ಮಹಾರಾಷ್ಟ್ರದ ರಾಯಗಢಕ್ಕೆ ಸುಮಾರು 500 ಕಿ.ಮೀ ದೂರವಿದ್ದು, ವಲಸೆ ಕಾರ್ಮಿಕರು ನಡೆದುಕೊಂಡೇ ತವರು ಸೇರಲು ಮುಂದಾಗಿದ್ದಾರೆ. ಇದರಲ್ಲಿ ಪುಟ್ಟಪುಟ್ಟ ಮಕ್ಕಳು ಸಹ ಇದ್ದಾರೆ. ಗಂಟುಮೂಟೆ ಕಟ್ಟಿಕೊಂಡು ಊಟ, ನೀರಿಗಾಗಿ ಪರದಾಡುತ್ತಿರುವ ಇವರ ಸ್ಥಿತಿ ನೋಡಿದರೆ ಎಂತಹವರಿಗೂ ಕೂಡ ಕರಳು ಚುರುಕ್ ಎನ್ನುತ್ತದೆ. ಕಟ್ಟಿಗೆ ಇದ್ದಲು ತಯಾರಿಸುವ ಕೆಲಸದ ಮೇಲೆ ತಮ್ಮೂರಿನಿಂದ ಮಾನ್ವಿಗೆ ಬಂದಿದ್ದ ವಲಸೆ ಕಾರ್ಮಿಕರು, ಲಾಕ್ಡೌನ್ನಿಂದಾಗಿ ಒಂದೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಕೈಯ್ಯಲ್ಲಿ ಹಣವಿಲ್ಲ, ವಾಹನದ ವ್ಯವಸ್ಥೆ ಇಲ್ಲದ ಕಾರಣ ಹೇಗಾದರೂ ಮಾಡಿ ತಮ್ಮೂರಿಗೆ ಸೇರುವ ತವಕದಲ್ಲಿ ಕಾರ್ಮಿಕರು ತಮ್ಮ ಮಕ್ಕಳ ಸಮೇತ ಒಟ್ಟು 57 ಜನರು ಧೈರ್ಯಮಾಡಿ ನಡೆದುಕೊಂಡು ತೆರಳುತ್ತಿದ್ದಾರೆ.
ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಬಳೂರಗಿ ಬಳಿ ರಸ್ತೆ ಪಕ್ಕದಲ್ಲಿ ಕೆಲ ಕಾಲ ಆಯಾಸ ತಣಿಸಿಕೊಂಡು ಮತ್ತೆ ತಮ್ಮ ಪಯಣ ಆರಂಭಿಸಿದ್ದಾರೆ. ಮಹಾರಾಷ್ಟ್ರ ಸರ್ಕಾರ ನಮ್ಮ ಸಹಾಯಕ್ಕೆ ಬರಬಹುದೆಂಬ ನಿರೀಕ್ಷೆಯಿಂದ ನಡೆದುಕೊಂಡು ಹೋಗುತ್ತಿದ್ದೇವೆ ಎಂಬ ಭರವಸೆಯನ್ನು ವಲಸೆ ಕಾರ್ಮಿಕರು ವ್ಯಕ್ತಪಡಿಸಿದ್ದಾರೆ.