ಕಲಬುರಗಿ: Who is this Siddaramaiah. ನಮ್ಮ ಪಕ್ಷದಲ್ಲಿ ಯಾರನ್ನು ಅಭ್ಯರ್ಥಿಯಾಗಿ ನಿಲ್ಲಿಸಬೇಕು ಅನ್ನೋದು ನನಗೆ ಗೊತ್ತು. ಅದನ್ನು ಹೇಳೋಕೆ ಸಿದ್ದರಾಮಯ್ಯ ಯಾವ ದೊಣ್ಣೆ ನಾಯಕ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇವರಿಂದ ಅರ್ಜಿ ತೆಗೆದುಕೊಂಡು ನಾನು ಅಭ್ಯರ್ಥಿ ಫೈನಲ್ ಮಾಡಬೇಕಾ? ಸಿದ್ದರಾಮಯ್ಯ ನನ್ನ ಪಕ್ಷದ ಮುಖಂಡರಾ ನಮ್ಮ ಪಕ್ಷದ ಅಭ್ಯರ್ಥಿ ಬಗ್ಗೆ ಚರ್ಚೆ ಮಾಡೋಕೆ. ಜೆಡಿಎಸ್ ಬಗ್ಗೆ ಚರ್ಚೆ ಮಾಡೋಕೆ ಅವ್ರಿಗೆ ಒಂದೇ ಒಂದು ವಿಚಾರ ಇದೆ. ಮುಸ್ಲಿಂ ಬಾಂಧವರನ್ನು ನಮ್ಮಿಂದ ದೂರ ಮಾಡಬೇಕು ಅಂತ ಅಂದುಕೊಂಡಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಮುಸ್ಲಿಂ ಸಮಾಜ ಕಾಂಗ್ರೆಸ್ ವಿರುದ್ಧ ತಿರುಗಿ ಬೀಳುತ್ತೆ:
ಜೆಡಿಎಸ್, ಬಿಜೆಪಿಯ ಬಿ ಟೀಂ ಅಂತ ಹೇಳಿಯೇ ಬಿಜೆಪಿಗೆ 105 ಸೀಟು ಬಂದಿರೋದು. ನಾನ್ಯಾಕೆ ಬಿಜೆಪಿಯನ್ನು ಗೆಲ್ಲಿಸೋದಕ್ಕೆ ಹೋಗಲಿ. ನನ್ನ ಪಕ್ಷ ಇಲ್ವಾ? ಮುಸ್ಲಿಂ ಬಂಧುಗಳಿಗೆ ಕಾಂಗ್ರೆಸ್ ಕೊಡುಗೆ ಏನು. ಮಾಜಿ ಪ್ರಧಾನಿ ದೇವೇಗೌಡರು ಮುಸ್ಲಿಂ ಕಮ್ಯೂನಿಟಿಗೆ ರಿಸರ್ವೇಶನ್ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಪದೇ ಪದೆ ಈ ರೀತಿಯಾಗಿ ಹೇಳಿದ್ರೆ ಮುಂದೆ ಮುಸ್ಲಿಂ ಸಮಾಜ ಕಾಂಗ್ರೆಸ್ ವಿರುದ್ಧ ತಿರುಗಿ ಬೀಳುತ್ತೆ ಹುಷಾರ್ ಎಂದು ಎಚ್ಚರಿಕೆ ರವಾನಿಸಿದರು.
ಅಷ್ಟಕ್ಕೂ ನಾನು ಪದವೀಧರರನ್ನು ಅಖಾಡಕ್ಕೆ ಇಳಿಸಿದ್ದೇನೆ. ಹೆಬ್ಬೆಟ್ಟು ಕ್ಯಾಂಡಿಡೇಟ್ ಹಾಕಿಲ್ಲ. ನಮ್ಮ ಬಗ್ಗೆ ಚರ್ಚೆ ಮಾಡಲು ನಿಮಗೆ ಯಾವ ಅರ್ಹತೆ ಇದೆ. ನಮ್ಮ ಬಗ್ಗೆ ಚರ್ಚೆ ಮಾಡೋದನ್ನು ಬಿಟ್ಟು, ಬಿಜೆಪಿ ಓಟಕ್ಕೆ ಬ್ರೇಕ್ ಹಾಕೋ ಕೆಲಸ ಮಾಡಲಿ ಎಂದು ಹೆಚ್ಡಿಕೆ ವಾಗ್ದಾಳಿ ನಡೆಸಿದರು.
ಹೆಂಡದದಂಗಡಿ ಮುಂದೆ ಕುಳಿತು ಮಾತಾನಾಡೋದಿಲ್ಲ:
ದೇವೇಗೌಡರು ಆರ್ಎಸ್ಎಸ್ ಬಗ್ಗೆ ಹೊಗಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಹೆಚ್ಡಿಕೆ, ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರನಿಂದ ನನಗೆ ಸರ್ಟಿಫಿಕೇಟ್ ಬೇಕಾಗಿಲ್ಲ. ದೇವೇಗೌಡರು ಸ್ವಾತಂತ್ರ್ಯ ಸಂದರ್ಭದಲ್ಲಿನ ಆರ್ಎಸ್ಎಸ್ ಬಗ್ಗೆ ಹೇಳಿರೋದು. ಇವಾಗಿನ ಆರ್ಎಸ್ಎಸ್ ಬಗ್ಗೆ ಹೇಳಿಲ್ಲ. ಬಿಜೆಪಿಯವರು ಸ್ವಾತಂತ್ರ್ಯ ಸಂದರ್ಭದಲ್ಲಿನ ಕಾಂಗ್ರೆಸ್ ಬೇರೆ ಈಗಿನ ಕಾಂಗ್ರೆಸ್ ಬೇರೆ ಅಂತಾ ಹೆಳ್ತಾರೆ. ಹಾಗೆಯೇ ಅಂದಿನ ಆರ್ಎಸ್ಎಸ್ ಬೇರೆ, ಇಂದಿನ ಆರ್ಎಸ್ಎಸ್ ಬೇರೆಯಾಗಿದೆ. ಆರ್ಎಸ್ಎಸ್ ಕಪಿಮುಷ್ಠಿಯಲ್ಲಿ ಈ ದೇಶದ ಆಡಳಿತ ನಡೆಯುತ್ತಿರೋದು. ನನ್ನ ಬಗ್ಗೆ ದೊಡ್ಡ ಮಟ್ಟದಲ್ಲಿ ಅಟ್ಯಾಕ್ ಮಾಡಿರೋರ ಬಗ್ಗೆ ಮಾಹಿತಿ ತಿಳಿದು ಮಾತಾಡುತ್ತೇನೆ. ನಾನು ಸಿದ್ದರಾಮಯ್ಯರ ಹಾಗೆ ಯಾವುದೋ ಹೆಂಡದ ಅಂಗಡಿ ಮುಂದೆ ಕುಳಿತು ಮಾತಾನಾಡೋದಿಲ್ಲ. ವಾಸ್ತವ ಅಂಶ ಗಮನಕ್ಕೆ ಬಂದಿರೋದ್ರ ಬಗ್ಗೆ ಜನರ ಮುಂದೆ ಇಡುತ್ತೇನೆ ಎಂದರು.
ಐಟಿ ದಾಳಿ ಕುರಿತು ಪ್ರತಿಕ್ರಿಯೆ:
ಇದೇ ವೇಳೆ ಮಾಜಿ ಸಿಎಂ ಯಡಿಯೂರಪ್ಪ, ಅವರ ಪುತ್ರ ವಿಜಯೇಂದ್ರರ ಆತ್ಮೀಯರ ಮನೆಯ ಮೇಲಿನ ದಾಳಿ ಸಂಬಂಧ, ಐಟಿ ದಾಳಿ ಬಗ್ಗೆ ನನ್ನ ಯಾವುದೇ ಪ್ರತಿಕ್ರಿಯೆ ಇಲ್ಲ. ಬಹಳ ದಿವಸಗಳ ನಂತರ, ಉಪ ಚುನಾವಣೆ ಸಮಯದಲ್ಲಿ ಐಟಿ ದಾಳಿ ನಡೆದಿದೆ. ಯಾವುದೋ ಮಾಹಿತಿ ಮೇರೆಗೆ ದಾಳಿ ಮಾಡಿರಬೇಕು. ಬಿಜೆಪಿಯ ಆಂತರಿಕ ವಿಷಯಗಳ ಸಮಸ್ಯೆಗಳ ಮೂಲಕ ಬಿಎಸ್ವೈ ಅವರನ್ನು ಹಿಡಿತದಲ್ಲಿ ಇಟ್ಟುಕೊಳ್ಳಲು ದಾಳಿ ಮಾಡಿಸಿರಬಹುದು ಎಂದು ಅಭಿಪ್ರಾಯಪಟ್ಟರು.