ಕಲಬುರಗಿ: ಹೈದರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕವೆಂದು ಮರು ನಾಮಕರಣ ಮಾಡಿದ್ದಕ್ಕೆ ನಮ್ಮದೇನೂ ಅಭ್ಯಂತರವಿಲ್ಲ. ಆದರೆ ಕೇವಲ ಹೆಸರು ಬದಲಾಯಿಸಿ ಬೆನ್ನು ತಟ್ಟಿಕೊಳ್ಳದೆ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ಸ್ಥಾಪನೆಗೊಂಡಿರುವ ಅಭಿವೃದ್ಧಿ ಮಂಡಳಿಗೆ 3 ಸಾವಿರ ಕೋಟಿ ರೂ. ಅನುದಾನ ನೀಡಿದ್ರೆ ಸಾರ್ಥಕವಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಎಸ್‍ವೈಗೆ ಟಾಂಗ್ ನೀಡಿದರು.
ನಗರದ ಶ್ರೀ ಬೀರಲಿಂಗೇಶ್ವರ ವಿದ್ಯಾರ್ಥಿ ಪ್ರಸಾದ ನಿಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಮಾಜದ ಉನ್ನತ ಹುದ್ದೆಯಲ್ಲಿರುವ ನೌಕರರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಹೈದರಾಬಾದ್ ಕರ್ನಾಟಕ ಭಾಗವನ್ನು ಕಲ್ಯಾಣ ಕರ್ನಾಟಕ ಮಾಡಬೇಕು ಎನ್ನುವ ಪ್ರಸ್ತಾವನೆ ನಮ್ಮ ಸರ್ಕಾರದಲ್ಲಿಯೇ ಇತ್ತು. ಆದರೆ ಆಗಲಿಲ್ಲ. ಈಗ ಬಿಜೆಪಿ ಸರ್ಕಾರ ಮಾಡಿದೆ. ಅದರಿಂದ ನಮಗೆ ಸಂತೋಷವಿದೆ. ಆದರೆ ಕೇವಲ ಹೆಸರಿಗೆ ಮಾತ್ರ ಕಲ್ಯಾಣ ಕರ್ನಾಟಕವೆನ್ನದೇ ಈ ಭಾಗವನ್ನು ಕಲ್ಯಾಣ ಮಾಡಿ ಎಂದರು.
ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಸಂವಿಧಾನಕ್ಕೆ ತಿದ್ದುಪಡಿ ತಂದು 371(ಜೆ) ಕಲಂ ಜಾರಿಗೊಳಿಸಿದ್ದೇವೆ. ಅದರಿಂದಾಗಿ ಹಿಂದುಳಿದ ಈ ಭಾಗದಲ್ಲಿ ಶಿಕ್ಷಣ, ಉದ್ಯೋಗಕ್ಕೆ ತುಂಬಾ ಅನುಕೂಲವಾಗಿದೆ. ಸಾಕಷ್ಟು ಜನರು ಉದ್ಯೋಗ ಹಿಡಿದಿದ್ದಾರೆ, ವೈದ್ಯರಾಗಿದ್ದಾರೆ ಎಂದರು. ನಾವು ಈ ಭಾಗದ ಅಭಿವೃದ್ಧಿಗಾಗಿ ಮಂಡಳಿಯನ್ನು ಸ್ಥಾಪಿಸಿ, ಅದಕ್ಕೆ ಪ್ರತಿ ವರ್ಷ 1500 ಕೋಟಿ ರೂ. ಮೀಸಲಿಟ್ಟಿದ್ದೇವೆ. ನೀವು ಅದನ್ನು ಹೆಚ್ಚಿಸಿ 3000 ಕೋಟಿ ರೂ. ಅನುದಾನ ನೀಡುವ ಮೂಲಕ ಮತ್ತಷ್ಟು ಅಭಿವೃದ್ಧಿಗೆ ಸಹಕಾರ ನೀಡಿ ಎಂದು ಸಿಎಂ ಬಿಎಸ್‍ವೈಗೆ ಸವಾಲು ಹಾಕಿದರು.
ಬಸವಣ್ಣನವರ ಬಗ್ಗೆ ನಮಗೂ ಅಪಾರ ಗೌರವವಿದೆ. ಈ ಭಾಗದ ಅಭಿವೃದ್ಧಿಗಾಗಿ ನಾನೂ ಹೆಚ್ಚೆಚ್ಚು ಅನುದಾನ ನೀಡಿ ಅಭಿವೃದ್ಧಿಪಡಿಸಿದ್ದೇನೆ. ಈಗ ಕಲ್ಯಾಣ ಕರ್ನಾಟಕ ಮಾಡಿರುವ ಬಿಜೆಪಿ ಸರ್ಕಾರವೂ ಇನ್ನಷ್ಟು ಹೆಚ್ಚಿನ ಹಣ ನೀಡಿ ಅಭಿವೃದ್ಧಿಗೊಳಿಸಲಿ. ಕೇವಲ ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದ್ರೆ ಹೊಟ್ಟೆ ತುಂಬೋದಿಲ್ಲ ಎಂದು ಸಲಹೆ ನೀಡಿದರು.
ನಾನು ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರೂ ಕಳೆದ ಚುನಾವಣೆಯಲ್ಲಿ ಜನರು ನಮ್ಮನ್ನು ಕೈ ಹಿಡಿಯಲಿಲ್ಲ. ಸಿದ್ದರಾಮಯ್ಯನವರು ಜಾತಿ ಮಾಡಿದ್ದ ಕಾರಣಕ್ಕಾಗಿ ಸೋತರು ಎಂದು ಆರೋಪಿಸಲಾಯಿತು. ಆದರೆ ನಾನು ಯಾವತ್ತೂ ಜಾತಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಜತೆಗೆ ವಿವಿಧ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳನ್ನು ಕೂಡ ಸನ್ಮಾನಿಸಲಾಯಿತು.