ಕಲಬುರಗಿ: ನವರಾತ್ರಿ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಉಸ್ಮಾನಾಬಾದ್ ಜಿಲ್ಲೆ ತುಳಜಾಪುರ ಅಂಬಾಭವಾನಿ ದೇವರ ದರ್ಶನ ನಿಷೇಧಿಸಿ ದೇವಸ್ಥಾನ ಆಡಳಿತ ಮಂಡಳಿ ಆದೇಶ ಹೊರಡಿಸಿದೆ.
ನವರಾತ್ರಿ ಅಂಗವಾಗಿ ಹುಣ್ಣಿಮೆ ದಿನ ತುಳಜಾಪುರ ಅಂಬಾಭವಾನಿ ದೇವಸ್ಥಾನಕ್ಕೆ ಕರ್ನಾಟಕ ಸೇರಿ ದೇಶದ ಮೂಲೆ ಮೂಲೆಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಪಾದಯಾತ್ರೆ ಮೂಲಕ ಬರುವ ಪದ್ಧತಿ ಇದೆ. ಜನರು ಒಂದಡೆ ಸೇರಿದರೆ ಕೊರೊನಾ ಹರಡುವ ಆತಂಕದಿಂದಾಗಿ ಅ.18 ರಿಂದ 21 ರವರೆಗೆ 4 ದಿನಗಳ ಕಾಲ ದರ್ಶನಕ್ಕೆ ಸಂಪೂರ್ಣ ನಿಷೇಧ ಹೇರಲಾಗಿದೆ. ದರ್ಶನಕ್ಕೆ ಮಾತ್ರವಲ್ಲ ಈ ನಾಲ್ಕು ದಿನಗಳ ಕಾಲ ಉಸ್ಮಾನಾಬಾದ್ ಜಿಲ್ಲೆಗೆ ಯಾವುದೇ ಜಿಲ್ಲೆ ಅಥವಾ ರಾಜ್ಯದಿಂದ ಸಾರ್ವಜನಿಕರು ಪ್ರವೇಶ ಮಾಡದಂತೆ ನಿಷೇಧಿಸಲಾಗಿದೆ.
ಈಗಾಗಲೇ ಸೆ.29 ರಿಂದ ಅ.21 ರವರೆಗೆ ಅಂಬಾಭವಾನಿ ದೇವಸ್ಥಾನದಲ್ಲಿ ನವರಾತ್ರಿ ಪೂಜೆ ಆಯೋಜನೆ ಮಾಡಲಾಗಿದೆ. ಆದರೆ ಹುಣ್ಣಿಮೆ ದಿನದ ಕೋಜಗಿರಿ ಪುರ್ಣಿಮಾ ಹಬ್ಬಕ್ಕೆ ಜನರನ್ನು ಸೇರಿಸದಿರಲು ದೇವಸ್ಥಾನ ಆಡಳಿತ ಮಂಡಳಿ ನಿರ್ಧಾರ ಮಾಡಿದೆ. ಸಾಂಪ್ರದಾಯಿಕವಾಗಿ ಪೂಜೆ ನೇರವೇರಿಸಲಾಗುತ್ತದೆ.
ಅ.7 ರಿಂದ 17ರ ವರೆಗೆ ದರ್ಶನಕ್ಕೆ ಷರತ್ತುಬದ್ಧ ವಿನಾಯತಿ!
ಹುಣ್ಣಿಮೆ ಪ್ರಯುಕ್ತ ಅ.18 ರಿಂದ 21 ರವರೆಗೆ ದರ್ಶನಕ್ಕೆ ನಿಷೇಧ ಹೇರಿದ ಅಧಿಕಾರಿಗಳು, ಅ.7 ರಿಂದ 17ರ ವರೆಗೆ ಭಕ್ತರಿಗೆ ಷರತ್ತುಬದ್ಧವಾಗಿ ತಾಯಿ ಅಂಬಾಭವಾನಿ ದರ್ಶನಕ್ಕೆ ಅವಕಾಶ ನೀಡಿದ್ದಾರೆ. ಎರಡು ಡೋಸ್ ಲಸಿಕೆ ಪಡೆದವರಿಗೆ ದರ್ಶನಕ್ಕೆ ಅವಕಾಶ ಇದ್ದು, ಮಹಾರಾಷ್ಟ್ರ ಹೊರೆತು ಪಡಿಸಿ ಹೋರ ರಾಜ್ಯದ ಭಕ್ತರು ಕಡ್ಡಾಯವಾಗಿ ಆನ್‌ಲೈನ್ ಪಾಸ್ ತೆಗೆದುಕೊಳ್ಳಬೇಕು. ನಿತ್ಯ ಬೆಳಗ್ಗೆ 6 ರಿಂದ ಸಂಜೆ 6ರವರೆಗೆ ಮಾತ್ರ ದರ್ಶನದ ವ್ಯವಸ್ಥೆ ಮಾಡಲಾಗಿದೆ.
ಪ್ರತಿನಿತ್ಯ 5 ಸಾವಿರ ಜನರಿಗೆ ಮಾತ್ರ ದರ್ಶನದ ಪಾಸ್ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ ಅಂತ ಜಿಲ್ಲಾಧಿಕಾರಿಯೂ ಆದ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಕೌಸ್ತುಬ್ ದಿವೆಂಗಾವಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.