ಕಲಬುರಗಿ: ಕಬ್ಬು ಬೆಳೆಯ 25 ಕೋಟಿ ರೂ. ಬಾಕಿ ಹಣ ಪಾವತಿಸುವಂತೆ ಆಗ್ರಹಿಸಿ ಜಿಲ್ಲೆಯ ಆಳಂದ ತಾಲೂಕಿನ ಭೂಸನೂರು ಗ್ರಾಮದ ರೈತರು ಎನ್ಎಸ್ಎಲ್ ಸಕ್ಕರೆ ಕಾರ್ಖಾನೆ ಎದುರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
ನಾಲ್ಕು ದಿನಗಳಿಂದ ಸತ್ಯಾಗ್ರಹ ನಡೆಯುತ್ತಿದ್ದು, ರೈತರ ಸಂಕಷ್ಟ ಕೇಳುವವರೆ ಇಲ್ಲದಂತಾಗಿದೆ. ಎಫ್‌ಆರ್‌ಪಿ ದರದ ಅನ್ವಯ ಪ್ರತಿ ಟನ್ ಕಬ್ಬಿಗೆ 2,943 ರೂ. ಕೊಡಬೇಕು. ಹೆಚ್‌ಎನ್‌ಟಿ ಕಟಾವು ಮತ್ತು ಸಾಗಾಣಿಕೆ ವೆಚ್ಚ 600 ರೂ. ಕಳೆದು 2,343 ರೂಪಾಯಿ ಹಣ ನೀಡಬೇಕು. ಆದರೆ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆ ಪ್ರತಿ ಟನ್ ಕಬ್ಬಿಗೆ 1,945 ರೂ. ಮಾತ್ರ ನೀಡಿದೆ, 400 ರೂಪಾಯಿ ಹಣ ಬಾಕಿ ನೀಡದೆ ಉಳಿಸಿಕೊಂಡು ರೈತರ ಹಣ ಲೂಟಿ ಮಾಡಿದೆ. ಪ್ರತಿ ಟನ್‌ಗೆ 400 ರೂಪಾಯಿಯಂತೆ ಒಟ್ಟು 25 ಕೋಟಿ ರೂ. ಬಾಕಿ ಹಣ ನೀಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಕೇಂದ್ರ ಸರ್ಕಾರ ಪ್ರತಿ ಟನ್‌ಗೆ ತಲಾ 138 ರೂ. ಪ್ರೋತ್ಸಾಹ ಧನ ನೀಡಬೇಕು ಎಂಬ ಆದೇಶ ಇದೆ. ಆದರೆ ಅದನ್ನು ನೀಡುತ್ತಿಲ್ಲ ಎಂದು ಆರೋಪಿಸುತ್ತಿರುವ ರೈತರು, ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ಕೂಡಲೇ ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸದಿದ್ದರೆ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಸತ್ಯಾಗ್ರಹನಿರತ ಇಬ್ಬರು ರೈತರ ಆರೋಗ್ಯದಲ್ಲಿ ಏರುಪೇರು:
ಉಪವಾಸ ಸತ್ಯಾಗ್ರಹಕ್ಕೆ ಕುಳಿತವರಲ್ಲಿ ಇಬ್ಬರು ರೈತರ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದೆ. ಆಸ್ಪತ್ರೆಗೆ ತೆರಳಲು ನಿರಾಕರಿಸಿದ ಅವರನ್ನು, ಪೊಲೀಸರು ಒತ್ತಾಯದಿಂದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.